ರಾಜ್ಯ

ಬೆಂಗಳೂರು: ಕೃಷಿಕ್ ಸಮಾಜ ಕಟ್ಟಡ ಬಳಕೆಗೆ ಹೈಕೋರ್ಟ್‌ ಅನುಮತಿ

ಬೆಂಗಳೂರಿನ ಹಡ್ಸನ್ ವೃತ್ತದ ಬಳಿ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜ ಸಂಸ್ಥೆ ನಿರ್ಮಿಸಿರುವ ಹಾಪ್ ಕಾಮ್ಸ್ ಕಟ್ಟಡ ಎಂದೇ ಪ್ರಸಿದ್ಧಿಯಾಗಿರುವ ಕಟ್ಟಡವು ಕಬ್ಬನ್‌ ಪಾರ್ಕ್‌ನಿಂದ ಹೊರಗಿದ್ದು, ಅದನ್ನು ಬಳಕೆ ಮಾಡಲು ಕೃಷಿಕ್‌ ಸಮಾಜಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

ಬೆಂಗಳೂರು: ಕೃಷಿಕ್ ಸಮಾಜ ಕಟ್ಟಡ ಬಳಕೆಗೆ ಹೈಕೋರ್ಟ್‌ ಅನುಮತಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬೆಂಗಳೂರಿನ ಹಡ್ಸನ್ ವೃತ್ತದ ಬಳಿ ಕರ್ನಾಟಕ ಪ್ರದೇಶ ಕೃಷಿಕ್ ಸಮಾಜ ಸಂಸ್ಥೆ ನಿರ್ಮಿಸಿರುವ ಹಾಪ್ ಕಾಮ್ಸ್ ಕಟ್ಟಡ ಎಂದೇ ಪ್ರಸಿದ್ಧಿಯಾಗಿರುವ ಕಟ್ಟಡವು ಕಬ್ಬನ್‌ ಪಾರ್ಕ್‌ನಿಂದ ಹೊರಗಿದ್ದು, ಅದನ್ನು ಬಳಕೆ ಮಾಡಲು ಕೃಷಿಕ್‌ ಸಮಾಜಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

ಕಬ್ಬನ್ ಉದ್ಯಾನ ವ್ಯಾಪ್ತಿ ಪ್ರದೇಶದಲ್ಲಿ ಅಕ್ರಮವಾಗಿ ಹಲವು ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್ ಉಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ನ್ಯಾಯಾಲಯವು ಜನವರಿ 25ರಂದು ಮಾಡಿದ್ದ ಆದೇಶದಂತೆ ಫೆಬ್ರವರಿ 4ರಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಕಾರರ ಸಮ್ಮುಖದಲ್ಲಿ ಕೃಷಿಕ್ ಸಮಾಜದ ಕಟ್ಟಡವಿರುವ ಜಾಗದ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಕೃಷಿಕ್ ಸಮಾಜ ಕಟ್ಟಡವು ಕಬ್ಬನ್ ಪಾರ್ಕ್ ಪ್ರದೇಶದ ವ್ಯಾಪ್ತಿಯಿಂದ ಹೊರಗಿದೆ ಎಂದು ಬೆಂಗಳೂರು ನಗರ ಸರ್ವೇ ವಲಯದ ಸಹಾಯಕ ನಿರ್ದೇಶಕಿ ಹರ್ಷ ಕುಮಾರಿ ಸಲ್ಲಿಸಿರುವ ಅನುಪಾಲನಾ ವರದಿ ಪರಿಗಣಿಸಿ ಪೀಠವು ಆದೇಶ ಮಾಡಿದೆ.

ಸರ್ವೇ ವರದಿಯನ್ನು ಪರಿಗಣಿಸಿದರೆ ಕಟ್ಟಡ ಉಪಯೋಗ ಮಾಡಲು ಕೃಷಿಕ್ ಸಮಾಜಕ್ಕೆ ಅನುಮತಿ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಈ ಅನುಮತಿ ಅರ್ಜಿ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಪಪಡಿಸಿದೆ.

ಪ್ರಕರಣದ ಹಿನ್ನೆಲೆ: ಕೃಷಿಕ್ ಸಮಾಜ ಕಟ್ಟಡದ ಬಳಕೆಗೆ ಹೈಕೋರ್ಟ್ ಹಿಂದೆ ನಿರ್ಬಂಧ ಹೇರಿತ್ತು. 2023ರ ಜನವರಿ 25ರಂದು ಕೃಷಿಕ್ ಸಮಾಜ ಪ್ರತಿನಿಧಿಸಿದ್ದ ವಕೀಲರು ಕಟ್ಟಡವಿರುವ ಜಾಗ ಕಬ್ಬನ್ ಪಾರ್ಕ್ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಕೃಷಿ ಭವನವಿರುವ 53,328 ಚದರ ಅಡಿ ಜಾಗವನ್ನು ಕರ್ನಾಟಕ ಪ್ರದೇಶ ಕೃಷಿಕ್ ಸಮಾಜಕ್ಕೆ 99 ವರ್ಷಗಳ ಅವಧಿಗೆ 1966ರಲ್ಲಿ ಸರ್ಕಾರ ಗುತ್ತಿಗೆ ನೀಡಿತ್ತು. ಜಾಗದ ಸಂಬಂಧ ಕೃಷಿಕ್ ಸಮಾಜವು ಈವರೆಗೂ ಆದಾಯ ತೆರಿಗೆ ಪಾವತಿಸುತ್ತಿದೆ ಎಂದು ತಿಳಿಸಿದ್ದರು.

ಅಲ್ಲದೆ, ಈ ಜಾಗವನ್ನು ಕಬ್ಬನ್ ಪಾರ್ಕ್ ಪ್ರದೇಶದಿಂದ ಹೊರಗಿಟ್ಟು ಸರ್ಕಾರ 2015ರ ನವೆಂಬರ್‌ 5ರಂದು ಆದೇಶಿಸಿದೆ. ಇಲ್ಲಿನ ಶಿಥಲೀಕರಣ ಕಟ್ಟಡವು 1965ರಿಂದಲೂ ಇದೆ. ಸದ್ಯ ನಿರ್ಮಿಸಲಾಗಿರುವ ಕಟ್ಟಡದ ಜಾಗವು ಕಬ್ಬನ್ ಪಾರ್ಕ್ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಕಟ್ಟಡ ಬಳಸಲು ಕೃಷಿಕ್ ಸಮಾಜಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಕರ್ನಾಟಕ ಪ್ರದೇಶ ಕೃಷಿಕ್ ಸಮಾಜದ ಕಟ್ಟಡವು ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿದೆಯೇ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ಸಲ್ಲಿಸವಂತೆ ಬೆಂಗಳೂರು ನಗರ ಸರ್ವೇ ವಲಯದ ಸಹಾಯಕ ನಿರ್ದೇಶಕರಿಗೆ ಆದೇಶಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.