ಬ್ರಾಹ್ಮಣ ಸಮುದಾಯ ಹೇಳಿಕೆ ಬಗ್ಗೆ ಗೋಕರ್ಣದಲ್ಲಿ ಸ್ಪಷ್ಟೀಕರಣ ಕೇಳಿದ ಅರ್ಚಕ: ಅದಕ್ಕೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ರಾಜ್ಯ ರಾಜಕೀಯದಲ್ಲಿ ಈಗ ಹೆಚ್ ಡಿ ಕುಮಾರಸ್ವಾಮಿ ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆ ವಿವಾದದ ಕಿಚ್ಚು ಹತ್ತಿಸಿದೆ. ಕಳೆದ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸುವಾಗ ಬ್ರಾಹ್ಮಣರ ಕುರಿತು ತಾವು ನೀಡಿದ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಕುಮಟಾ: ರಾಜ್ಯ ರಾಜಕೀಯದಲ್ಲಿ ಈಗ ಹೆಚ್ ಡಿ ಕುಮಾರಸ್ವಾಮಿ ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆ ವಿವಾದದ ಕಿಚ್ಚು ಹತ್ತಿಸಿದೆ. ಕಳೆದ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸುವಾಗ ಬ್ರಾಹ್ಮಣರ ಕುರಿತು ತಾವು ನೀಡಿದ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ನಾನು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿಲ್ಲ ಎಂದಿದ್ದಾರೆ.
ಈ ಮಧ್ಯೆ ನಿನ್ನೆ ಹೆಚ್ ಡಿ ಕುಮಾರಸ್ವಾಮಿಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಗೋಕರ್ಣಕ್ಕೆ ಭೇಟಿ ನೀಡಿದ ಹೆಚ್ ಡಿಕೆ ಶಿವನ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು. ಬಳಿಕ ಅಲ್ಲಿನ ಅರ್ಚಕರು ನೇರವಾಗಿ ಕುಮಾರಸ್ವಾಮಿಯವರನ್ನು ಅವರು ಬ್ರಾಹ್ಮಣರ ಬಗ್ಗೆ ನೀಡಿರುವ ಹೇಳಿಕೆ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದರು.
ಅರ್ಚಕರು ಏನು ಹೇಳಿದರು?: ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಬಗ್ಗೆ ಅಭಿಮಾನ ಹೊಂದಿದ್ದೇವೆ. ಆದರೆ, ನಿಮ್ಮ ಹೇಳಿಕೆಗೆ ಭಾರೀ ಚರ್ಚೆ ನಡೆಯುತ್ತಿದೆಯಲ್ಲ, ನಿಮ್ಮ ಹೇಳಿಕೆ ಬಗ್ಗೆ ನಮಗೆ ಬೇಸರವಾಗಿದೆ ಎಂದರು. ಗೋಕರ್ಣದಲ್ಲಿಯೇ ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ಅರ್ಚಕರು ತಾಕೀತು ಮಾಡಿದರು.
ಕುಮಾರಸ್ವಾಮಿಯವರು ಪ್ರತಿ ಊರುಗಳಲ್ಲಿ ಪಂಚರತ್ನ ಯಾತ್ರೆಗೆ ಮುನ್ನ ಅಲ್ಲಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನಾಡಿ ಪೂಜೆ-ಪ್ರಾರ್ಥನೆ ಸಲ್ಲಿಸಿ ಯಾತ್ರೆ ಆರಂಭಿಸುತ್ತಾರೆ. ಅದರಂತೆ ನಿನ್ನೆ ಗೋಕರ್ಣಕ್ಕೆ ಹೋಗಿದ್ದರು. ಈ ವೇಳೆ ಕುಮಾರಸ್ವಾಮಿಯವರಿಗೆ ಈ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಪ್ರಹ್ಲಾದ್ ಜೋಷಿ ಸಂಸ್ಕೃತಿ ಇರುವ ಬ್ರಾಹ್ಮಣರಲ್ಲ, ಸಮಾಜವನ್ನು ಒಡೆಯುವ ಬ್ರಾಹ್ಮಣರ ಗುಂಪಿಗೆ ಸೇರಿದವರು: ಹೆಚ್ ಡಿ ಕುಮಾರಸ್ವಾಮಿ
ಈ ವೇಳೆ ಅರ್ಚಕರಿಗೆ ಸ್ಪಷ್ಟೀಕರಣ ನೀಡಲು ಬಯಸಿದ ಕುಮಾರಸ್ವಾಮಿಯವರು, ನಾನೆಂದಿಗೂ ಬ್ರಾಹ್ಮಣ ಸಮಾಜದ ಬಗ್ಗೆ ಟೀಕೆ ಮಾಡಿಲ್ಲ, ಈ ಸಮಾಜದ ಬಗ್ಗೆ ಗೌರವ ಇಟ್ಟಿದ್ದೇನೆ. ನಾನು ಮಾತನಾಡಿದ್ದು ಬ್ರಾಹ್ಮಣ ಸಮುದಾಯದ ಕುರಿತಲ್ಲ, ವ್ಯಕ್ತಿಗಳ ಬಗ್ಗೆಯಷ್ಟೆ. ರಾವಣನೂ ಬ್ರಾಹ್ಮಣ. ಆದರೆ ಅವನನ್ನು ನಾವು ರಾಕ್ಷಸ ಅಂತ ಗುರುತಿಸುತ್ತೇವೆಯೇ ಹೊರತು ಬ್ರಾಹ್ಮಣ ಅಂತ ಅಲ್ಲ ಎಂದರು.
ನಂತರ ಕುಮಟಾ ಹಾಗೂ ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಶಿವನಿಗೆ ರುದ್ರಾಭಿಷೇಕ ಆರಂಭಿಸಿದ್ದೇ ರಾವಣೇಶ್ವರ. ಇಷ್ಟಾದರೂ ರಾವಣನನ್ನು ರಾಕ್ಷಸ ಎಂದೇ ಗುರುತಿಸುತ್ತೇವೆಯೇ ಹೊರತು ಬ್ರಾಹ್ಮಣ ಎಂದಲ್ಲ. ಅದೇ ರೀತಿ ನಾನು ಶೃಂಗೇರಿಯ ಚಂದ್ರಮೌಳೇಶ್ವರ ದೇವಸ್ಥಾನ ಧ್ವಂಸ ಮಾಡಿದವರ ಡಿಎನ್‌ಎಗಳ ಬಗ್ಗೆ ಮಾತನಾಡಿದ್ದೇನೆ. ವಿದ್ಯಾರಣ್ಯರು ಕಟ್ಟಿದ ಚಂದ್ರಮೌಳೇಶ್ವರ ದೇಗುಲದ ಮೇಲೆ ದಾಳಿ ಮಾಡಿದವರು ಯಾರು? ಶಿವಾಜಿ ಹತ್ಯೆ ಮಾಡಿದವರು ಯಾರು? ಆ ವರ್ಗ(ಪೇಶ್ವೆಗಳು)ದ ಜನರನ್ನು ನೀವು ಬ್ರಾಹ್ಮಣರು ಅಂತ ಕರೆಯುತ್ತೀರಾ ಎಂದು ಮರುಪ್ರಶ್ನಿಸಿದರು.
ಬ್ರಾಹ್ಮಣರ ಅಭಿವೃದ್ಧಿಗೆ ಅನುದಾನ: ಬ್ರಾಹ್ಮಣ ಸಮಾಜದ ಬಗ್ಗೆ ನಾನು ಇಂದಿಗೂ ಗೌರವ ಇಟ್ಟುಕೊಂಡಿದ್ದೇನೆ. ನನ್ನ ಹೇಳಿಕೆಯಲ್ಲಿ ಚರ್ಚೆಯಾಗಿರುವುದು ವ್ಯಕ್ತಿ ಮಾತ್ರ. ಅದನ್ನು ಸಮಾಜಕ್ಕೆ ಅನ್ವಯಿಸುವುದು ತಪ್ಪು. ಬ್ರಾಹ್ಮಣರ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಬಿಂಬಿಸುತ್ತಿದ್ದು, ನನ್ನ ಹೇಳಿಕೆ ನಂತರ ಅನೇಕ ಜನ ದೂರವಾಣಿ ಮುಖಾಂತರ ಹೇಳಿಕೆ ಸರಿ ಇದೆ ಎಂದಿದ್ದಾರೆ. ನಾನು ಬ್ರಾಹ್ಮಣರ ಬಗ್ಗೆ ಯಾವುದೇ ರೀತಿಯ ಅವಮಾನಕರ ಮಾತು ಹೇಳಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ .25 ಕೋಟಿ ಅನುದಾನ ಹಾಗೂ ನಿವೇಶನ ನೀಡಿದ್ದೇನೆ. ಆದರೆ ಬಿಜೆಪಿ ಸರ್ಕಾರ ಎಷ್ಟುಹಣ ಬಿಡುಗಡೆ ಮಾಡಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


