ಕಾವೇರಿ ಜಲವಿವಾದ ಸಮಸ್ಯೆ ಚರ್ಚೆಗೆ ಸರ್ವಪಕ್ಷ ಸಭೆ, ಆದೇಶ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ: ಡಿ ಕೆ ಶಿವಕುಮಾರ್
ಕಾವೇರಿ ನೀರಿಗೆ ತಮಿಳುನಾಡು ಆಗ್ರಹಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಶೀಘ್ರವೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ಕಾವೇರಿ ನೀರಿಗೆ ತಮಿಳುನಾಡು ಆಗ್ರಹಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಶೀಘ್ರವೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಸರ್ವ ಪಕ್ಷಗಳ ಜತೆ ಚರ್ಚೆ ನಡೆಸುತ್ತೇವೆ. ಈ ಬಗ್ಗೆ ಸಭೆ ಕರೆಯುತ್ತೇವೆ ಎಂದು ಹೇಳಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಕೂಡ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿಂದೆ ಅವರ ಸರ್ಕಾರ ಇದ್ದಾಗಲೂ ಸಂಕಷ್ಟದ ಸಮಯವಿದ್ದರೂ ತಮಿಳುನಾಡಿಗೆ ಹಲವು ಸಲ ನೀರು ಹರಿಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ನೀರು ಬಿಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನೀರು ಬಿಟ್ಟಿರುವ ದಾಖಲೆಗಳಿವೆ. ಈ ವಿಚಾರದಲ್ಲಿ ಅನಗತ್ಯ ರಾಜಕಾರಣ ಮಾಡಬಾರದು. ನಮ್ಮ ಪರಿಸ್ಥಿತಿ ಹದಗೆಟ್ಟಿದ್ದರೂ ತಮಿಳುನಾಡಿನವರು ಆಗ್ರಹ ಮುಂದುವರೆಸಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ: ತಮಿಳುನಾಡಿಗೆ ನಿತ್ಯ 10,000 ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಹ ತಿಳಿಸಿದರು.
ನಮ್ಮಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಹೀಗಿದ್ದರೂ ನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಪ್ರಾಧಿಕಾರ ತಿಳಿಸಿದೆ. ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಆದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ತಮಿಳುನಾಡಿಗೆ ಕೃಷಿ ಅಗತ್ಯಗಳಿಗೆ ನೀರು ಬೇಕಾಗಿದೆ. ಕಾವೇರಿ ಭಾಗದಲ್ಲಿ ಮಳೆಯ ತೀವ್ರ ಅಭಾವ ಎದುರಾಗಿದೆ. ಹೀಗಾಗಿ ನಮಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಮಿಳುನಾಡು ಸಹ ನಮ್ಮ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


