ರಾಜ್ಯ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ; 'ಅದ್ಧೂರಿ ಸ್ವಾಗತ' ಕೋರಿದ ಬಿಜೆಪಿ ಸಚಿವ ಶ್ರೀರಾಮುಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ ಬಳ್ಳಾರಿಗೆ ತಲುಪುವ ಮೂಲಕ 1000 ಕಿಮೀ ಕ್ರಮಿಸಿದೆ. ಇದೇ ವೇಳೆ ಬಿಜೆಪಿ ನಾಯಕ, ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ; 'ಅದ್ಧೂರಿ ಸ್ವಾಗತ' ಕೋರಿದ ಬಿಜೆಪಿ ಸಚಿವ ಶ್ರೀರಾಮುಲು
ಶ್ರೀರಾಮುಲು
Published On :

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ ಬಳ್ಳಾರಿಗೆ ತಲುಪುವ ಮೂಲಕ 1000 ಕಿಮೀ ಕ್ರಮಿಸಿದೆ. ಇದೇ ವೇಳೆ ಬಿಜೆಪಿ ನಾಯಕ, ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಶ್ರೀರಾಮುಲು, 1999ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲುವ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ! ಎಂದು ಹೇಳಿದ್ದಾರೆ.

ಮುಂದುವರಿದು, ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಎಐಸಿಸಿಯ ಕಾಯಂ ಅಧ್ಯಕ್ಷರ ಮುದ್ದಿನ ಪುತ್ರ ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ ಎಂದಿದ್ದಾರೆ.

ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು‌ ಬಿಡುತ್ತಾ, ಕೈಲಾಗದಿದ್ದರೂ ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು-ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಪೋಜು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ. ತಾವು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದಾಗ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡದೇ ಇರುವುದಕ್ಕೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಲು ಸಂಕೋಚ ಏಕೆ? ಎಂದು ಪ್ರಶ್ನಿಸಿದ್ದಾರೆ.

1999ರ ಲೋಕಸಭಾ ಚುನಾವಣೆ ನಂತರ ಬಳ್ಳಾರಿ ಜಿಲ್ಲೆಗೆ 3300 ಕೋಟಿ ರೂ.ಗಳ ಸುಳ್ಳು ಪ್ಯಾಕೇಜ್ ಅನ್ನು ನಿಮ್ಮ ಮಾತೃಶ್ರೀಯವರಾದ ಸೋನಿಯಾ ಗಾಂಧಿಯವರು ಘೋಷಿಸಿದ್ದರು ಎಂಬುದನ್ನು ಮಾನ್ಯ ರಾಹುಲ್ ಗಾಂಧಿ ಅವರಿಗೆ ನೆನಪಿಲು ಇಚ್ಛಿಸುತ್ತೇನೆ. ಬಳ್ಳಾರಿ ಜನತೆ ಸೋನಿಯಾಗಾಂಧಿ ಅವರು  ಘೋಷಿಸಿದ ಪ್ಯಾಕೇಜ್ ಬಂದೇ ಬರುತ್ತದೆ ಎಂದು ಜನ ಕಣ್ ಕಣ್ ಬಿಟ್ಟಿದ್ದೇ ಆಯಿತು, ಆದರೆ ಅದು ಎಲ್ಲಿಗೆ ಬಂತು? ಯಾವಾಗ ಬಂತು? ಯಾರಿಗೆ ಹೋಯಿತು? ಯಾರ  ಜೇಬಿಗೆ ಸೇರಿತು? ಎಂಬ ಬಗ್ಗೆ ಕಾಂಗ್ರೆಸ್‍ನ ನಾಯಕರ ಬಳಿ ಉತ್ತರ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋನಿಯಾಗಾಂಧಿ ಅವರು ಸ್ಪರ್ಧೆ ಮಾಡಿದಾಗ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಜನರು ಆಶೀರ್ವಾದ ಮಾಡಿದರು. ಆದರೆ, ಗೆದ್ದ ಮೇಲೆ ಇಲ್ಲಿಗೆ ಎಷ್ಟು ಸಲ ಬಂದರು? ಕನಿಷ್ಠ ಪಕ್ಷ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಸೌಜನ್ಯಕ್ಕಾದರೂ ಕೃತಜ್ಞತೆ ಹೇಳಿದ್ದಾರಾ? ಇದನ್ನು ಜನತೆಯ ಮುಂದಿಡಲು ಸಿದ್ಧರಿದ್ದೀರಾ?. ಬಳ್ಳಾರಿಗೆ ಸೋನಿಯಾಗಾಂಧಿ ಅಥವಾ ಕಾಂಗ್ರೆಸ್‍ನ ಕೊಡುಗೆ ಏನು ಎಂಬುದನ್ನು ಅವರ ಪುತ್ರ ರಾಹುಲ್ ಗಾಂಧಿ ಹೇಳಬೇಕು. ದೇಶ ಬೆಸೆಯುತ್ತೇನೆ ಎಂದು ಹೊರಟಿರುವ ಅವರಿಗೆ ಜಿಲ್ಲೆಯ ಜನ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

ಕಡೆ ಪಕ್ಷ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಿಮ್ಮ ಕಾಂಗ್ರೆಸ್ ಪಕ್ಷ ಬಳ್ಳಾರಿ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂಬುವುದನ್ನು ನಿಮ್ಮ ಭಾಷಣದಲ್ಲಿ ಹೇಳುವಿರಾ ರಾಹುಲ್ ಗಾಂಧಿ ಅವರೇ. ನಿಮ್ಮ ಬೆಸುಗೆಯ ಯಾತ್ರೆಗೆ ಜನ ಬಗ್ಗೋದಿಲ್ಲ. ಅವರನ್ನು ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಂಡಿದ್ದೀರಾ?. ಬಳ್ಳಾರಿ ಜಿಲ್ಲೆಗೆ ಸೋನಿಯಾ ಗಾಂಧಿ ಅವರು ಒಮ್ಮೆ ಲೋಕಸಭಾ ಸದಸ್ಯರಾಗಿ ಕೊಟ್ಟ ಕೊಡುಗೆ ಶೂನ್ಯ. ಅದನ್ನು ರಾಹುಲ್‌ ಗಾಂಧಿ ಮರೆತರೂ, ಜನ ಮರೆತಿಲ್ಲ. ಯಾತ್ರೆಯ ಮೂಲಕ ಮರೆಮಾಚಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಶ್ರೀರಾಮುಲು ಅವರ ಇನ್ನಷ್ಟು ಟ್ವೀಟ್‌ಗಳು ಇಲ್ಲಿವೆ ನೋಡಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.