ಮಂಗಳೂರು ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಇಬ್ಬರು ಶಂಕಿತರು ಪೊಲೀಸರು ವಶಕ್ಕೆ
ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡವು ಮೈಸೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಮೈಸೂರು: ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡವು ಮೈಸೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮತ್ತು ಮೈಸೂರು ಪೊಲೀಸರು ಮೈಸೂರಿನ ಲೋಕನಾಯಕ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಪೈಕಿ ಓರ್ವ ಶಂಕಿತ ಮಂಗಳೂರು ಮೂಲದವರೆಂದು ಹೇಳಲಾಗಿದೆ.
ಅಂತೆಯೇ ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡದ ವ್ಯಕ್ತಿಯನ್ನೂ ಪೊಲೀಸರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಮಂಗಳೂರು ಪೊಲೀಸರು ತಂಡವು ಮೈಸೂರಿಗೆ ಬಂದಿದೆ. ಇಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರ ಮತ್ತು ಆತನ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯಿಂದ ಶಂಕಿತ ಉಗ್ರ 10 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಪಡೆದಿದ್ದ. ಪ್ರತೀ ಮೊಬೈಲ್ ಗೆ 500ರಿಂದ 1500 ರೂ ನೀಡಿ ಮೊಬೈಲ್ ಗಳನ್ನು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ.
ಮೈಸೂರಿನಲ್ಲಿ ರೂಂ ಬಾಡಿಗೆ ಪಡೆದಿದ್ದ ಶಂಕಿತ
ಇನ್ನು ಪೊಲೀಸರ ವಶದಲ್ಲಿರುವ ಶಂಕಿತ ಉಗ್ರ ಮೈಸೂರಿನ ಮೆಟಗಾನಹಳ್ಳಿಯಲ್ಲಿ ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಮೋಹನ್ ಕುಮಾರ್ ಎಂಬವವರ ಮನೆಯಲ್ಲಿ ರೂಂ ಬಾಡಿಗೆ ಪಡೆದಿದ್ದ. ಒಂದು ತಿಂಗಳಿನಿಂದ ಈತ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ಮೈಸೂರಲ್ಲಿ ಮೊಬೈಲ್ ಅಸೆಂಬಲಿಂಗ್ ತರಬೇತಿ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಂತೆಯೇ ಈತ ಸ್ಥಳೀಯ ವ್ಯಕ್ತಿಯಿಂದ ಸುಮಾರು 500ರಿಂದ 1500 ರೂವರೆಗಿನ ಸುಮಾರು 10 ಮೊಬೈಲ್ ಗಳನ್ನು ಖರೀದಿ ಮಾಡಿ ಅವುಗಳ ಬಿಡಿಭಾಗಗಳಿಂದ ಟೈಮರ್ ಬಾಂಬ್ ತಯಾರಿಸುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ಪೊಲೀಸ್ ಆಯುಕ್ತ ರಮೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಕಂಕನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್‌ವೆಲ್ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


