ರಾಜ್ಯ

ಆಸ್ಪತ್ರೆಯಲ್ಲಿ ಅಮಾನವೀಯವಾಗಿ ನಡೆದುಕೊಂಡರೆ ವಜಾಕ್ಕೆ ಕ್ರಮ; ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ- ಡಾ. ಕೆ.ಸುಧಾಕರ್

ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಅಮಾನವೀಯವಾಗಿ ನಡೆದುಕೊಂಡರೆ ವಜಾಕ್ಕೆ ಕ್ರಮ; ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ- ಡಾ. ಕೆ.ಸುಧಾಕರ್
ಡಾ. ಕೆ. ಸುಧಾಕರ್
Published On :

ಬೆಂಗಳೂರು: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು. ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತರಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಘಟನೆಯಿಂದ ಅನಾಥವಾಗಿರುವ  ನತದೃಷ್ಟ ಹೆಣ್ಣುಮಗಳನ್ನು ಬಾಲಕಿಯರ ಮಂದಿರಕ್ಕೆ ದಾಖಲಿಸಲಾಗಿದೆ. ಆಕೆಗೆ ಸರ್ಕಾರದಿಂದಲೇ 5 ಲಕ್ಷ ರೂ. ಎಫ್‌ಡಿ ಇರಿಸಲು ಕ್ರಮ ವಹಿಸಲಾಗಿದೆ. ಹಾಗೆಯೇ ಆಕೆಯ ಶೈಕ್ಷಣಿಕ ಭವಿಷ್ಯವನ್ನೂ ರೂಪಿಸಲಾಗುವುದು. ಈ ಘಟನೆಯಲ್ಲಿ ಅಮಾನವೀಯವಾಗಿ ನಡೆದುಕೊಂಡ ವೈದ್ಯರು, ಸಿಬ್ಬಂದಿಗೆ ಹಾಗೂ ಜಿಲ್ಲಾ ಸರ್ಜನ್‌ ಗೆ, ಆಡಳಿತ ವೈಫಲ್ಯ ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಕರ್ತವ್ಯದಲ್ಲಿರುವ ವೈದ್ಯರಿಗೆ ಕೂಡ ಪ್ರಕರಣದ ಗಂಭೀರತೆ ಬಗ್ಗೆಯೂ ತಿಳಿಸಲಾಗಿದೆ. ಹಾಗೆಯೇ ಅವರಿಗೂ ಶೋಕಾಸ್‌ ನೋಟಿಸ್‌ ನೀಡಿ 24 ಗಂಟೆಯೊಳಗೆ ಉತ್ತರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ರೀತಿಯ ಘಟನೆ ಎಂದೂ ಮರುಕಳಿಸಬಾರದು. ಅದಕ್ಕಾಗಿ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ. ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು. ಈ ಬಗ್ಗೆ ಹಿಂದಿನಿಂದಲೂ ಸೂಚನೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 76 ತುರ್ತು ಸೇವೆಗಳನ್ನು ಜೋಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆಗಳು ಇಲ್ಲವಾದರೆ, ಖಾಸಗಿ ಆಸ್ಪತ್ರೆಯಲ್ಲಿ ಆ ಸೇವೆ ಪಡೆಯಬಹುದು. ಆಗ ಸರ್ಕಾರವೇ ವೆಚ್ಚ ಭರಿಸುತ್ತದೆ ಎಂದರು.

ಕರಾಳ ಘಟನೆ: ಎಲ್ಲಾ ಸೌಲಭ್ಯಗಳಿದ್ದರೂ ಆರೋಗ್ಯ ಸಿಬ್ಬಂದಿ ಮಾಡಿದ ಕೆಲಸದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದು ಇಡೀ ಮಾನವ ಸಂಕುಲಕ್ಕೆ ಕರಾಳ ದಿನವಾಗಿದೆ. ಇದಕ್ಕಾಗಿ ನಾನು ಬಹಳ ವಿಷಾದ, ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಈ ಕುಟುಂಬದ ಸಂಬಂಧಿಕರನ್ನು ಪತ್ತೆ ಮಾಡಲು 36 ಗಂಟೆಗಳಿಂದ ಪೊಲೀಸರು ಶ್ರಮಿಸುತ್ತಿದ್ದಾರೆ. ಆದರೆ ಯಾರೂ ಇನ್ನೂ ಮುಂದೆ ಬಂದಿಲ್ಲ. ಇಂತಹ ಪರಿಸ್ಥಿತಿ ಇದ್ದರೂ, ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದರು.

ಗರ್ಭಿಣಿ ಯಾವುದೇ ರಾಜ್ಯದವರಾಗಿದ್ದರೂ, ದಾಖಲೆ ಇಲ್ಲದಿದ್ದರೂ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಬೇಕಿತ್ತು. ಮಾನವೀಯತೆಯಿಂದ ಅವರೊಂದಿಗೆ ನಡೆದುಕೊಳ್ಳಬೇಕಿತ್ತು. ಇಲ್ಲಿ ದಾಖಲೆ ಮುಖ್ಯವಲ್ಲ, ಜೀವ ಮುಖ್ಯ. ಕೆಲವರಿಂದ ಆದ ಈ ಘಟನೆಯಿಂದ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹಿರಂಗ ಸವಾಲು: ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆಯಲ್ಲಿ ಎಷ್ಟು ಶಿಶುಗಳು ಸತ್ತಿವೆ ಎಂದು ದಾಖಲೆ ನೀಡುತ್ತೇನೆ. ಆಗ ಸಿದ್ದರಾಮಯ್ಯನವರು ಅಥವಾ ಆಗಿನ ಆರೋಗ್ಯ ಸಚಿವರು ರಾಜೀನಾಮೆ ನೀಡಲಿಲ್ಲ. ಇಂತಹ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆಂದರೆ ಇವರು ರಾಜಕೀಯ ನಾಯಕರು ಮಾತ್ರವಲ್ಲ, ಒಬ್ಬ ಉತ್ತಮ ಮಾನವನಾಗಲೂ ಸಾಧ್ಯವಿಲ್ಲ. ಇಷ್ಟು ಕೆಳ ಹಂತಕ್ಕೆ ಹೋಗಿ ಅವರು ತೀರ್ಮಾನ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಬಾರದು ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಎಷ್ಟು ಆಸ್ಪತ್ರೆಗಳಲ್ಲಿ ಎಷ್ಟು ಸಾವುಗಳಾಗಿವೆ ಎಂಬ ದಾಖಲೆಗಳನ್ನು ನೀಡುತ್ತೇನೆ. ಅವರು ಕೂಡ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ, ನಾನು ಕೂಡ ಆರೋಗ್ಯ ಸಚಿವನ ಸ್ಥಾನಕ್ಕೆ ನೀಡುತ್ತೇನೆ. ಇದು ಬಹಿರಂಗ ಸವಾಲು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.