ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ: ಹೊಸ ಯೋಜನೆಗಳ ಲೋಕಾರ್ಪಣೆ; ವಿದ್ಯಾನಿಧಿ ರೈತರಲ್ಲಿ ಭರವಸೆ ಮೂಡಿಸಿದೆ - ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಲವು ನೂತನ ಯೋಜನೆಗಳನ್ನು ಗುರುವಾರ ಲೋಕಾರ್ಪಣೆ ಮಾಡಿದರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಲವು ನೂತನ ಯೋಜನೆಗಳನ್ನು ಗುರುವಾರ ಲೋಕಾರ್ಪಣೆ ಮಾಡಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಇಂದು ಏರ್ಪಡಿಸಿದ್ದ ಒಂದು ವರ್ಷದ ಸಾಧನೆಯ ಮಾಹಿತಿ ನೀಡುವ ಸಮಾರಂಭವನ್ನು ರದ್ದುಪಡಿಸಲಾಗಿದೆ. ಆದರೆ ಸಾರ್ವಜನಿಕರಿಗೆ ಈ ವರೆಗೆ ಕೈಗೊಂಡ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡುವುದು ಹಾಗೂ ಮುಂದೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಸುದ್ಧಿಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಯುವಕರ ಸಬಲೀಕರಣ, ಶಿಕ್ಷಣ, ಆರೋಗ್ಯ ವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಲೋಕಾರ್ಪಣೆ ಗೊಳಿಸಿದ ನೂತನ ಯೋಜನೆಗಳ ವಿವರ...
ಇದನ್ನು ಓದಿ: ರಾಜ್ಯದಲ್ಲಿ ಅಗತ್ಯ ಬಿದ್ದರೆ ಯೋಗಿ ಮಾಡೆಲ್ ರೂಲ್ಸ್ ಜಾರಿ, ಕೋಮು ಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ: ಸಿಎಂ ಬೊಮ್ಮಾಯಿ
ಎಸ್ ಸಿ /ಎಸ್ ಟಿ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಡಿ ಡಿಬಿಟಿ ವರ್ಗಾವಣೆ ಇಂದಿನಿಂದ ಪ್ರಾರಂಭವಾಗಲಿದೆ. ಸುಮಾರು 25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ 700 ಕೋಟಿ ರೂ. ಒದಗಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆ
ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಯೋಜನೆ : ಪ್ರತಿಯೊಂದು ಕ್ಷೇತ್ರದಲ್ಲಿ 100 ಪರಿಶಿಷ್ಟ ಜಾತಿ/ ಪಂಗಡದ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆಗೆ ಚಾಲನೆ.
8000 ಶಾಲಾ ಕೊಠಡಿಗಳ ನಿರ್ಮಾಣ
ಶಿಕ್ಷಣ ಹಾಗೂ ಅದರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ‘ವಿವೇಕ’ ಯೋಜನೆಯಡಿ ಮೊದಲ ಬಾರಿಗೆ 8000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ.
ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ
ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣಗೊಳಿಸುವ ಯೋಜನೆಗೆ ಚಾಲನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 71 ಪಿಹೆಚ್ಸಿ ಗಳನ್ನು ರಾಜ್ಯದ ಸರಾಸರಿಗಿಂತ ಕಡಿಮೆ ಸೂಚ್ಯಂಕ ಇರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು.
‘ಸ್ತ್ರೀ ಸಾಮರ್ಥ್ಯ’ ಯೋಜನೆ
ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರೂ. ನೀಡುವ ಜೊತೆಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಆಂಕರ್ ಬ್ಯಾಂಕ್ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ‘ಸ್ತ್ರೀ ಸಾಮರ್ಥ್ಯ ಯೋಜನೆ’ ಗೆ ಚಾಲನೆ ನೀಡಲಾಗಿದೆ. ಸುಮಾರು 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ಎಂಡ್ ಟು ಎಂಡ್ ನೆರವು ನೀಡಲಾಗುತ್ತಿದೆ.
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
ರಾಜ್ಯದ ಸುಮಾರು 28 ಸಾವಿರ ಗ್ರಾಮಗಳಲ್ಲಿ ತಲಾ ಒಂದು ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚಿಸಿ, ಯುವಕರಿಗೂ ಆರ್ಥಿಕ ನೆರವು, ಬ್ಯಾಂಕ್ ವ್ಯವಸ್ಥೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ. ಇದರಿಂದ 5 ಲಕ್ಷ ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುವುದು.
ಪುಣ್ಯಕೋಟಿ ದತ್ತು ಯೋಜನೆ
ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸಲು ಪುಣ್ಯಕೋಟಿ ದತ್ತು ಯೋಜನೆ ಜಾರಿ. ಈ ಯೋಜನೆಗೆ ಸಂಬಂಧಿಸಿದ ವೆಬ್ಸೈಟ್ ನ ಲೋಕಾರ್ಪಣೆ. ಪ್ರತಿಯೊಬ್ಬ ವ್ಯಕ್ತಿಯೂ ವಾರ್ಷಿಕ 11000 ರೂ. ಪಾವತಿಸಿ, ಒಂದು ಗೋವಿನ ಒಂದು ವರ್ಷದ ನಿರ್ವಹಣೆಯನ್ನು ಮಾಡಬಹುದಾಗಿದೆ. ಅವರೇ ಗೋವುಗಳನ್ನು ದತ್ತು ತೆಗೆದುಕೊಳ್ಳಬಹುದು, ಅಥವಾ 11,000 ಮೊತ್ತ ಪಾವತಿಸಿದ್ದಲ್ಲಿ ಸರ್ಕಾರದ ಗೋ ಶಾಲೆಗಳಲ್ಲಿ ಗೋವುಗಳ ರಕ್ಷಣೆಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು.
ನೇಕಾರರ ಮಕ್ಕಳಿಗೆ ವಿದ್ಯಾನಿಧಿ
ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 10 – 12 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ
ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, 50,000 ಟ್ಯಾಕ್ಸಿ ಚಾಲಕ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ
ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಸರ್ಕಾರದ ಆದೇಶಗಳನ್ನು ಹೊರಡಿಸಲಾಗಿದ್ದು, ಅನುದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಎಲ್ಲ ವಿದ್ಯಾನಿಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದ ರೈತ ವಿದ್ಯಾನಿಧಿ ಯೋಜನೆಯಡಿ ರೈತ ವಿದ್ಯಾನಿಧಿಯಿಂದ ಕಳೆದ ವರ್ಷ 8.50 ಲಕ್ಷ ಹಾಗೂ ಈ ವರ್ಷ 9.8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಪ್ರತಿ ದಿನವೂ ಕೂಡ 15-20 ಸಾವಿರ ಮಕ್ಕಳಿಗೆ ಡಿಬಿಟಿ ಮೂಲಕ ಹಣ ತಲುಪಿದೆ. ರೈತರ ಕುಟುಂಬಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ರೈತರಲ್ಲಿ ಭರವಸೆ ಮೂಡಿದೆ ಎಂದು ಸಿಎಂ ಹೇಳಿದರು.
ಬಡವರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಶಾಸನ ಮೊತ್ತ ಹೆಚ್ಚಳವಾಗಿದ್ದು, ಹೆಚ್ಚಿನ ಆರ್ಥಿಕ ನೆರವು , ಆಸರೆಯನ್ನು ಬಡವರಿಗೆ, ಅಂಗವಿಕಲರಿಗೆ ನೀಡಲಾಗಿದೆ. ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯಲ್ಲಿ ಅನುದಾನವನ್ನು ಹಚ್ಚಿಸಲಾಗಿದೆ. ಎಸ್.ಸಿ/ ಎಸ್.ಟಿ., ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿವಿಧ ನಿಗಮಗಳಿಗೆ ಬಜೆಟ್ ನಲ್ಲಿ ನೀಡಿರುವ ಮೊತ್ತಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


