75 ದಿನಗಳ ಉಚಿತ ಬೂಸ್ಟರ್ ಡೋಸ್ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ
ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ಮುಂದಿನ 75 ದಿನಗಳವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರು ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಲು...

ಬೆಂಗಳೂರು: ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ಮುಂದಿನ 75 ದಿನಗಳವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರು ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಇಂದು ಆರೋಗ್ಯ ಇಲಾಖೆ ಆಯೋಜಿಸಿದ್ದ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕೋವಿಡ್ ಲಸಿಕಾಕರಣ ಅಮೃತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೋವಿಡ್ ಸಾಂಕ್ರಾಮಿಕದ ಉಳಿದ ಪರಿಣಾಮವನ್ನು ನಿಗ್ರಹಿಸಲು ಬೂಸ್ಟರ್ ಡೋಸ್ ಲಸಿಕೆ ಅಗತ್ಯ ಎಂದರು.
ಕರ್ನಾಟಕದಲ್ಲಿ 75 ದಿನಗಳ ಲಸಿಕೆ ಅಭಿಯಾನದಲ್ಲಿ 7500 ಕೇಂದ್ರಗಳಲ್ಲಿ ಲಸಿಕೆಗಳನ್ನು ನಿರಂತರವಾಗಿ ನೀಡಲಾಗುತ್ತಿದ್ದು, ಆರೋಗ್ಯ ಕಾರ್ಯಕರ್ತರು ಅಭಿಯಾನ ರೀತಿಯಲ್ಲಿ ಕೆಲಸ ಮಾಡಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ. ಆರೋಗ್ಯವಂತ ಸಮಾಜ, ಆರ್ಥಿಕವಾಗಿ ಸಬಲವಾದ ಸಮಾಜವನ್ನು ನಿರ್ಮಿಸುತ್ತದೆ. ಆರೋಗ್ಯ, ಶಿಕ್ಷಣ ಸರಿಯಾಗಿದ್ದರೆ ಮಾತ್ರ ರಾಜ್ಯ ಪ್ರಗತಿಹೊಂದಲು ಸಾಧ್ಯ. ಈ ದಿಸೆಯಲ್ಲಿ ಲಸಿಕೆ ಅಭಿಯಾನ ಮಹತ್ವದ ಹೆಜ್ಜೆಯಾಗಿದೆ ಎಂದರು.
ಕೋವಿಡ್ ಬಂದವರಲ್ಲಿ ಕೋವಿಡ್ ನಂತರ ಪರಿಣಾಮಗಳು ಇದ್ದೇ ಇರುತ್ತದೆ. ಈ ಪರಿಣಾಮಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮೂಲಕ ಅದನ್ನು ಕುಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಕೇಂದ್ರ ಸರ್ಕಾರ ‘ಹರ್ ಘರ್ ದಸ್ತಕ್’ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕದ ಅದ್ಭುತ ಸಾಧನೆ
ವೈದ್ಯರು, ಅಧಿಕಾರಿಗಳು, ನರ್ಸುಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ಸಂದರ್ಭದಲ್ಲಿ ನಾಯಕರಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಲಸಿಕೆ ಬಗ್ಗೆ ಅರಿವು ಮೂಡಿಸಿರುವ ಅವರ ನಿಸ್ವಾರ್ಥಸೇವೆಯನ್ನು ಸರ್ಕಾರ ಗುರುತಿಸುತ್ತದೆ. ಅದರ ಪರಿಣಾಮ ರಾಜ್ಯದಲ್ಲಿ ಕೋವಿಡ್ ಮೊದಲ ಡೋಸ್ ಶೇ 102 ರಷ್ಟು, ಅಂದರೆ 5.49 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಎರಡನೇ ಡೋಸ್ 5.42 ಕೋಟಿ ಆಗಿದೆ. ಇದೊಂದು ಅದ್ಭುತವಾದ ಸಾಧನೆ. ಲಸಿಕೆ ಅಭಿಯಾನದಲ್ಲಿ ಭಾಗವಹಿಸಿರುವ ವೈದ್ಯರು, ಅಧಿಕಾರಿಗಳು, ನರ್ಸುಗಳು, ಅರೆವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್ ಸೇರಿದಂತೆ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಯಶಸ್ವಿ ನಿಯಂತ್ರಣ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ನ್ನು ಉಚಿತವಾಗಿ ನೀಡಲು ಆದೇಶಿಸಿದ್ದು, ಲಸಿಕೆಗಳನ್ನು ಪೂರೈಸಿದ್ದಾರೆ. ಇದೊಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಹಲವಾರು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಲಸಿಕೀಕರಣ ಮಹತ್ವದ ಕೆಲಸವನ್ನು ಮಾಡಿದೆ. ಮೊದಲು ರೋಗ ಉಲ್ಬಣವಾಗಿ ನಾಲ್ಕೈದು ವರ್ಷಗಳ ನಂತರ ರೋಗಕ್ಕೆ ಲಸಿಕೆಗಳನ್ನು ವಿದೇಶದಲ್ಲಿ ಕಂಡುಹಿಡಿಯಲಾಗುತ್ತಿತ್ತು. ನಂತರ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಭಾರತಕ್ಕೆ ಬರುವ ವೇಳೆಗೆ 10-12 ವರ್ಷಗಳು ಬೇಕಾಗುತ್ತಿತ್ತು. ಈಗ ಭಾರತದಲ್ಲಿಯೇ ಲಸಿಕೆಗಳನ್ನು ತಯಾರಿಸಿ, 130 ಕೋಟಿ ಜನಸಂಖ್ಯೆಗೆ ಯಶಸ್ವಿಯಾಗಿ ಲಸಿಕೆ ನೀಡಿ ಸಾಂಕ್ರಾಮಿಕ ನಿರ್ವಹಣೆಯೊಂದಿಗೆ ನಿಯಂತ್ರಣವನ್ನೂ ಮಾಡಲಾಯಿತು. ವಿದೇಶಗಳಿಗೂ ರಫ್ತು ಮಾಡಲಾಯಿತು. ಇದು ನಮ್ಮ ವಿಜ್ಞಾನಿಗಳ ವಿಶ್ವಾಸವನ್ನು ಬಿಂಬಿಸುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


