ಜೊಯಿಡಾ: ಕೊನೆಗೂ ಬೋನಿಗೆ ಬಿದ್ದ ಆತಂಕ ಸೃಷ್ಟಿಸಿದ ಹುಲಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಜಾನುವಾರುಗಳನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅದಿಕಾರಿಗಳು ಯಶಸ್ವಿಯಾಗಿದ್ದಾರೆ.

ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಜಾನುವಾರುಗಳನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅದಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಲಿಯನ್ನು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಳ್ನೆ ಎಂಬಲ್ಲಿ ದನದ ಕೊಟ್ಟಿಗೆಯಲ್ಲಿ ಇಡಲಾಗಿದ್ದ ಬೋನಿನಲ್ಲಿ ಭಾನುವಾರ ರಾತ್ರಿ ಹುಲಿ ಸೆರೆಯಾಗಿದೆ. ಜೊಯಿಡಾ ತಾಲೂಕಿನ ಉಳವಿ ಗ್ರಾಮದ ಜನರು ಈ ಬೆಳವಣಿಗೆಯಿಂದ ನಿಟ್ಟುಸಿರು ಬಿಟ್ಟಿದ್ದು, ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಒಂದು ವಾರದಲ್ಲಿ 10 ಜಾನುವಾರುಗಳನ್ನು ಕೊಂದಿದ್ದರಿಂದ ಇಡೀ ಪ್ರದೇಶದಲ್ಲಿ ಭಯ ಆವರಿಸಿತ್ತು. ಹುಲಿಯು ಪ್ರತಿದಿನ ಜನವಸತಿ ಪ್ರದೇಶಕ್ಕೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ವೇಳೆ ಒಂದು ಅಥವಾ ಎರಡು ಹಸುಗಳು ಅಥವಾ ಕರುಗಳನ್ನು ಕೊಂದು ಕಾಡಿಗೆ ಎಳೆದೊಯ್ಯುತ್ತಿತ್ತು.
ಚಂದ್ರಾಳಿ, ಹೆನಕೋಳದಲ್ಲಿ ಮೂರು ಹಸುಗಳು ಹಾಗೂ ಮೆಳೆ ಪ್ರದೇಶದಲ್ಲಿ ಎರಡು ಎತ್ತುಗಳ ಮೇಲೆ ದಾಳಿ ಮಾಡಿದೆ. ಹುಲಿಗೆ ವಯಸ್ಸಾಗಿರುವುದರಿಂದ ಮನೆಗಳಿಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ ಸಾಕಿದ ಜಾನುವಾರುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಯ ದಾಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರು ಯಾವಾಗ ಬೇಕಾದರೂ ನರಭಕ್ಷಕವಾಗಿ ಬದಲಾಗಬಹುದಾದ ಹುಲಿಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಶಾಸಕ, ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರನ್ನು ಒತ್ತಾಯಿಸಿದ್ದರು.
ಕಾಳಿ ಮೀಸಲು ಅರಣ್ಯ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯೋ ಕ್ರಿಸ್ತರಾಜ ನೇತೃತ್ವದ ತಂಡ ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಅಂತಿಮವಾಗಿ ಹುಲಿಯು ಬೋನಿಗೆ ಬಿದ್ದಿದೆ. ಉಳುವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಅವರು ಈ ಭಾಗದ ಜನರಿಗೆ ಸಹಾಯ ಮಾಡಿದ ಅರಣ್ಯಾಧಿಕಾರಿಗಳನ್ನು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


