ನೂತನ ಮಠಾಧೀಶರ ನೇಮಕ ಕುರಿತು ಮುರುಘಾ ಮಠದಲ್ಲಿ ಗದ್ದಲ
ಡಾ.ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ನೂತನ ಪೀಠಾಧಿಪತಿ ನೇಮಕ ಕುರಿತು ಮಠದಲ್ಲಿ ಗದ್ದಲಗಳು ಏರ್ಪಟ್ಟಿದೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ: ಡಾ.ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ನೂತನ ಪೀಠಾಧಿಪತಿ ನೇಮಕ ಕುರಿತು ಮಠದಲ್ಲಿ ಗದ್ದಲಗಳು ಏರ್ಪಟ್ಟಿದೆ ಎಂದು ತಿಳಿದುಬಂದಿದೆ.
ನೂತನ ಪೀಠಾಧಿಪತಿ ನೇಮಕ ಸಂಬಂಧ ನಿನ್ನೆ ವೀರಶೈವ-ಲಿಂಗಾಯತ ಸಮಾಜದ ಸದಸ್ಯರೊಂದಿಗೆ ಸಭೆ ನಡೆಯಿತು. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ಸ್ಮಾರಕದಲ್ಲಿ ಮಾಜಿ ಸಚಿವ ಎಚ್.ಏಕಾಂತಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗದ್ದಲಗಳು ಏರ್ಪಟ್ಟಿದ್ದು ಕಂಡು ಬಂದಿತ್ತು.
ಆಡಳಿತಾಧಿಕಾರಿ ನೇಮಕ ವಿಚಾರ ಚರ್ಚೆಗೆ ಬಂದಾಗ ಅದರ ಅಗತ್ಯವಿಲ್ಲ ಎಂದು ಯುವಕ ಕಾರ್ತಿಕ್ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಸಭೆಯಲ್ಲಿದ್ದ ಕೆಲವರು ಕಾರ್ತಿಕ್ ಎಂಬ ಯುವಕನಿಗೆ ಬೆಂಬಲ ನೀಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಏಕಾಂತಯ್ಯ ಅವರು, 30 ಜಿಲ್ಲೆಗಳ ವೀರಶೈವ ಮಹಾಸಭಾ ಸದಸ್ಯರು ಚಿತ್ರದುರ್ಗದಲ್ಲಿ ಪಾದಯಾತ್ರೆ ನಡೆಸಿ ನಂತರ ಮುರುಘಾ ಮಠದ ಮುಂದೆ ಧರಣಿ ನಡೆಸಿ ನೂತನ ಮಠಾಧೀಶರ ನೇಮಕಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಮಠಾಧೀಶರು ಮೂರು ತಿಂಗಳಿನಿಂದ ಜೈಲಿನಲ್ಲಿ ಇರುವುದರಿಂದ ಮಠದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಹಾಗೂ ಮಠದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಠದ ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯಲು ನೂತನ ಮಠಾಧೀಶರ ಅವಶ್ಯಕತೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮುರುಘಾ ಮಠದ ವಿರುದ್ಧ ಷಡ್ಯಂತ್ರ: ಒಡನಾಡಿ ಸಂಸ್ಥೆಯ ಮುಖಂಡರ ವಿರುದ್ಧ ತನಿಖೆಗೆ ಸಾಮಾಜಿಕ ಕಾರ್ಯಕರ್ತ ಆಗ್ರಹ
ಆಡಳಿತಾಧಿಕಾರಿ ನೇಮಕ ಮಾಡುವಂತೆ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಚಿತ್ರದುರ್ಗದ ವೀರಶೈವ ಮಹಾಸಭಾ ಕೂಡ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
3ನೇ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು
ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ಜಾಮೀನು ಮಂಜೂರಾಗಿದೆ.
ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಮುರುಘಾಮಠದ ಉತ್ತರಾಧಿಕಾರಿ ಬಸವಾದಿತ್ಯಗೆ ಚಿತ್ರದುರ್ಗ ಬಾಲ ನ್ಯಾಯ ಮಂಡಳಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಕ್ಟೋಬರ್ 13 ರಂದು 2ನೇ ಪೋಕ್ಸೋ ಪ್ರಕರಣ ದಾಖಲಾಗಿತ್ತು. 2ನೇ ಪ್ರಕರಣದಲ್ಲೂ ಬಸವಾದಿತ್ಯ 3ನೇ ಆರೋಪಿಯಾಗಿದ್ದು, ಮೊದಲ ಪ್ರಕರಣದಲ್ಲಿ ಈಗಾಗಲೇ ಜಾಮೀನು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


