'ಹೆಣ್ಣುಮಕ್ಕಳ ಬಗ್ಗೆ ನನಗೆ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ': ಮಾಜಿ ಸ್ಪೀಕರ್ ರಮೇಶ್ ಕುಮಾರ್
ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕುರಿತು ಬೆಳಗಾವಿಯ ಸುವರ್ಣ ವಿಧಾನ ಸೌಧದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಲಾಪ ವೇಳೆ ಹೇಳಿಕೆ ನೀಡಿ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಬೆಳಗಾವಿ: ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕುರಿತು ಬೆಳಗಾವಿಯ ಸುವರ್ಣ ವಿಧಾನ ಸೌಧದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಲಾಪ ವೇಳೆ ಹೇಳಿಕೆ ನೀಡಿ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್(Ex speaker Ramesh Kumar) ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಹೇಳಿಕೆ ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಮೇಶ್ ಕುಮಾರ್(Rape remark) ಕ್ಷಮೆಯಾಚಿಸಿದ್ದಾರೆ. ಇಂದು ಬೆಳಗ್ಗೆ ಸದನದಲ್ಲಿ ಮಾತನಾಡಿದ ಅವರು, ನನಗೆ ಹೆಣ್ಣು ಮಕ್ಕಳ ಬಗ್ಗೆ, ಹೆಣ್ಣು ಕುಲದ ಬಗ್ಗೆ ಅಪಾರ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ, ಕ್ಷಮೆಯಿರಲಿ, ಈ ವಿವಾದ ಇಲ್ಲಿಗೇ ನಿಲ್ಲಲಿ, ಸುಖಾಂತ್ಯವಾಗಲಿ ಎಂದು ಕೇಳಿಕೊಂಡರು.
ರಮೇಶ್ ಕುಮಾರ್ ಅವರು ನಿನ್ನೆ ಅತ್ಯಾಚಾರ ಕುರಿತು ಮಾತನಾಡಿದ ಕೂಡಲೇ ಆಡಳಿತಾರೂಢ ಪಕ್ಷ ಬಿಜೆಪಿಯ ನಾಯಕರು ರಮೇಶ್ ಕುಮಾರ್ ವಿರುದ್ಧ ಕೆಂಡಕಾರಲು ಆರಂಭಿಸಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ(B S Yedyurappa) ಅವರು, ರಮೇಶ್ ಕುಮಾರ್ ಅವರು ಸದನದಲ್ಲಿಯೇ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಇಂದು ಬೆಳಗಾವಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದ್ದರು.
ಮಾಜಿ ಸ್ಪೀಕರ್ ಆಗಿ ಉಪದೇಶಗಳ ಮಾತುಗಳನ್ನಾಡುವ ರಮೇಶ್ ಕುಮಾರ್ ಅವರ ಮಾತುಗಳು ಖಂಡನೀಯ, ಮಹಿಳೆಯರಿಗೆ ಅಪಮಾನ ಮಾಡುವಂತಹ ಉದ್ಧಟತನ ಮಾತುಗಳಿಗೆ ಕ್ಷಮೆಯಾಚಿಸಬೇಕು. ಆ ಸಂದರ್ಭದಲ್ಲಿ ಸಹಜವಾಗಿ ಕುಳಿತು ಸ್ಪೀಕರ್ ಮಾತನಾಡಿದ್ದಾರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಯಾವುದೇ ತಪ್ಪು ಮಾಡಿಲ್ಲ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.
ರಮೇಶ್ ಕುಮಾರ್ ಅವರು ಮಾತನಾಡಿರುವುದು ಅಕ್ಷಮ್ಯ ಅಪರಾಧ. ಇಡೀ ದೇಶವೇ ಸದನವನ್ನು ನೋಡುತ್ತಿದೆ. ಮಹಿಳೆಯರನ್ನು ಗೌರವಿಸುವ, ಹೆಣ್ಣನ್ನು ಪೂಜಿಸುವ ಭಾರತದಲ್ಲಿ ಈ ರೀತಿ ಹೇಳಿಕೆ ನೀಡುವುದು, ಪವಿತ್ರವಾದ ಸ್ಥಾನದಲ್ಲಿರುವ ಸದನದಲ್ಲಿ ಈ ರೀತಿ ಅಕ್ಷಮ್ಯವಾಗಿ ಮಾತನಾಡುವುದು ತಪ್ಪು ಎಂದು ಬಿಜೆಪಿ ಶಾಸಕಿಯರು ವಿರೋಧ ವ್ಯಕ್ತಪಡಿಸಿದ್ದು ಇಂದು ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗಿಳಿದಿದ್ದರು. ಸದನದಲ್ಲಿ ರಮೇಶ್ ಕುಮಾರ್ ಅವರು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಬಿಡುವುದಿಲ್ಲ, ಸದನದ ಬಾವಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಇತರ ಬಿಜೆಪಿ ಶಾಸಕಿಯರು ಆಗ್ರಹಿಸಿದ್ದರು.
ಇನ್ನು ನಿನ್ನೆ ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿದ್ದರು. ನಾನು ಸದನದಲ್ಲಿ ನೀಡಿರುವ ಹೇಳಿಕೆ ಹೆಣ್ಣುಮಕ್ಕಳಿಗೆ ನೋವುಂಟುಮಾಡುವ ಉದ್ದೇಶವಾಗಿರಲಿಲ್ಲ. ಅತ್ಯಾಚಾರದಂತಹ ಹೀನ ಅಮಾನವೀಯ ಕೃತ್ಯವನ್ನು ಹಗುರವಾಗಿ ತೆಗೆದುಕೊಳ್ಳುವ ಉದ್ದೇಶ ಆ ಸಂದರ್ಭದಲ್ಲಿ ನನ್ನದಾಗಿರಲಿಲ್ಲ. ಇನ್ನು ಮುಂದೆ ನಾನು ಬಹಳ ಜಾಗರೂಕತೆಯಿಂದ ಮಾತನಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆದರೆ ಕೇವಲ ಟ್ವಿಟ್ಟರ್ ನಲ್ಲಿ ಬರೆದು ಬಿಟ್ಟರೆ ಸಾಕಾಗುವುದಿಲ್ಲ, ಸದನದಲ್ಲಿಯೇ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಶಾಸಕಿಯರು ಕೂಡ ಒತ್ತಾಯಿಸಿದ್ದರು. ಇನ್ನು ರಮೇಶ್ ಕುಮಾರ್ ಅವರ ಮಾತಿಗೆ ನಕ್ಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವರ್ತನೆಗೆ ಸಹ ವಿರೋಧ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


