ಚಿತ್ರೋದ್ಯಮಕ್ಕೆ ಗುಡ್ ನ್ಯೂಸ್? ಥಿಯೇಟರ್ ಗಳಲ್ಲಿ ಶೇ.100 ಆಸನ ಭರ್ತಿ ಕುರಿತು 2-3 ದಿನದಲ್ಲಿ ತೀರ್ಮಾನ- ಡಾ. ಕೆ.ಸುಧಾಕರ್
ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿ ವಿಚಾರವಾಗಿ ಇನ್ನೆರಡು ಮೂರು ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿ ವಿಚಾರವಾಗಿ ಇನ್ನೆರಡು ಮೂರು ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರೋಕ್ಷವಾಗಿ ದಸರಾ ಹಬ್ಬಕ್ಕೆ ಮುನ್ನ ಥಿಯೇಟರ್ ಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದ್ದಾರೆ.
ಇಂದು ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಚಿತ್ರ ನಿರ್ಮಾಪಕರು ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಸಂಕ್ರಾಮಿಕ ಮತ್ತು ಥಿಯೇಟರ್ ಗಳು ಸಂಪೂರ್ಣವಾಗಿ ತೆರೆಯದಿರುವುದರಿಂದ ಚಿತ್ರೋದ್ಯಮ ಸಾಕಷ್ಟು ಸಂಕಷ್ಟದಲ್ಲಿದೆ. ಹೀಗಾಗಿ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ಇದಕ್ಕೆ ಸಿಎಂ ಬೊಮ್ಮಾಯಿಯವರ ಜೊತೆ ಚರ್ಚೆ ಮಾಡಿ ಇನ್ನೆರಡು ಮೂರು ದಿನಗಳಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, 2-3 ದಿನಗಳಲ್ಲಿ ಈ ಬಗ್ಗೆ ಸಭೆಯನ್ನು ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದುವರೆಗೆ ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಆಸನ ಭರ್ತಿಗೆ ಎರಡು ತಿಂಗಳ ಹಿಂದೆಯೇ ಅನುಮತಿ ಕೊಟ್ಟಿದ್ದೆವು. ಈಗ ಚಲನಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರು ಬಂದು ಆದಷ್ಟು ಶೀಘ್ರದಲ್ಲಿ ಶೇಕಡಾ 100ರಷ್ಟು ಸೀಟು ಭರ್ತಿಗೆ ಮನವಿ ಮಾಡಿದ್ದಾರೆ. ನಾನು ಈ ಸಂಬಂಧ ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳಿಗೆ ಪತ್ರ ಬರೆಯುವುದರ ಜೊತೆಗೆ ದೂರವಾಣಿ ಮೂಲಕ ಕೂಡ ಮಾತನಾಡಿದ್ದೇನೆ.
ಇಂದು ರಾಜ್ಯದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ತೆಗೆದುಕೊಂಡಿರುವ ನಿಲುವುಗಳೇನು, ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚಿ, ಅವರಿಗೆ ಸಹಕಾರ ಮತ್ತು ಮುನ್ನೆಚ್ಚರಿಕೆ ತೆಗೆದುಕೊಂಡು ನಾನು, ಮುಖ್ಯಮಂತ್ರಿಗಳು ಮತ್ತು ಹಿರಿಯ ಸಚಿವರುಗಳು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


