ಚಾಮರಾಜನಗರ: ಕೋವಿಡ್ 3ನೇ ಅಲೆ ಭೀತಿ; ರಾಜ್ಯದ ಏಕೈಕ ಗೌರಿ ದೇವಾಲಯ ಈ ಬಾರಿಯೂ ಬಂದ್
ರಾಜ್ಯದ ಏಕೈಕ ಗೌರಿ ದೇವಾಲಯ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಬಂದ್ ಆಗಿದೆ. ಚಾಮರಾಜನಗರ ಜಿಲ್ಲೆ ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ದೇವಾಲಯವಿದ್ದು ಗೌರಿ ಹಬ್ಬದ ಸಂಭ್ರಮ ಮಾಯವಾಗಿದೆ.

ಚಾಮರಾಜನಗರ: ರಾಜ್ಯದ ಏಕೈಕ ಗೌರಿ ದೇವಾಲಯ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಬಂದ್ ಆಗಿದೆ. ಚಾಮರಾಜನಗರ ಜಿಲ್ಲೆ ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ದೇವಾಲಯವಿದ್ದು ಗೌರಿ ಹಬ್ಬದ ಸಂಭ್ರಮ ಮಾಯವಾಗಿದೆ.
ಪ್ರತಿ ವರ್ಷ ಬಾಗಿನ ಅರ್ಪಿಸಿ ಹಬ್ಬ ಆಚರಿಸುತ್ತಿದ್ದ ಗೃಹಿಣಿಯರಿಗೆ ಕೊರೋನಾ ಸತತ ಎರಡನೇ ವರ್ಷವೂ ನಿರಾಸೆ ಉಂಟು ಮಾಡಿದೆ. ಎಲ್ಲಾ ಕಡೆ ಗಣೇಶನಿಗೆ ಅಗ್ರ ಪೂಜೆಯಾದರೆ ಕುದೇರು ಗ್ರಾಮದಲ್ಲಿ ಮಾತ್ರ ಗೌರಿಗೇ ಮೊದಲ ಪ್ರಾಶಸ್ತ್ಯ. ರಾಜ್ಯದಲ್ಲೇ ಗೌರಿ ದೇವಾಲಯ ಇರುವ ಏಕೈಕ ಗ್ರಾಮ ಇದಾಗಿದೆ. ಹಾಗೆಯೇ ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವುದು ವಾಡಿಕೆಯಾದರೆ ಈ ಗ್ರಾಮದಲ್ಲಿ ಮಾತ್ರ ಗೌರಿಯನ್ನು ಪ್ರತಿಷ್ಠಾಪಿಸಿ 12 ದಿನಗಳ ಕಾಲ ವಿಜೃಂಭಣೆಯಿಂದ ಪೂಜೆ-ಪುನಸ್ಕಾರಗಳನ್ನು ಮಾಡಿ ನಂತರ ವಿಸರ್ಜಿಸಲಾಗುತ್ತಿತ್ತು.
ಕುದೇರು ಗ್ರಾಮದಲ್ಲಿ ನಡೆಯುವ ಈ ಗೌರಿ ಹಬ್ಬಕ್ಕೆ ಹಳೇ ಮೈಸೂರು ಪ್ರಾಂತ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. 12 ದಿನಗಳ ಕಾಲ ಸಂಭ್ರಮವೋ ಸಂಭ್ರಮ. ಆದರೆ ಕೋವಿಡ್-19 ನಿಂದ ಈ ಬಾರಿಯು ಇದಕ್ಕೆಲ್ಲ ಕಡಿವಾಣ ಬಿದ್ದಿದೆ.
ಸಾಮಾನ್ಯವಾಗಿ ಗೌರಿಗೆ ಎಲ್ಲಿಯೂ ದೇವಾಲಯವಿಲ್ಲ. ಆದರೆ, ಕುದೇರು ಗ್ರಾಮದಲ್ಲಿ 107 ವರ್ಷಗಳ ಹಿಂದೆಯೇ ಸ್ವರ್ಣಗೌರಿ ದೇವಾಲಯ ನಿರ್ಮಿಸಲಾಗಿದೆ. ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಕುದೇರು ಗ್ರಾಮದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಈ ಗೌರಮ್ಮನಿಗೆ ಹರಕೆ ಹೊತ್ತುಕೊಂಡರೆ ಎಲ್ಲಾ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ವಿಶೇಷವಾಗಿ ಕಂಕಣಭಾಗ್ಯ, ಸಂತಾನಭಾಗ್ಯ ವಿವಾಹಿತರಿಗೆ ಮುತ್ತೈದೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತಿತ್ತು. ಇಷ್ಟಾರ್ಥ ಸಿದ್ದಿಸಿದವರು ಗೌರಿಗೆ ಬಾಗಿನ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


