ರಾಜ್ಯ

ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದ ನೂತನ ಹೃದ್ರೋಗ ಘಟಕ ಉದ್ಘಾಟನೆ

ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ.

ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದ ನೂತನ ಹೃದ್ರೋಗ ಘಟಕ ಉದ್ಘಾಟನೆ
ಉದ್ಘಾಟನೆ ಬಳಿಕ ಬ್ಲಾಕ್ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published On :

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ. 

350 ಬೆಡ್‌ಗಳ ಸೌಲಭ್ಯ ಹೊಂದಿರುವ ನೂತನ ಘಟಕ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌, ಇನ್ಫೋಸಿಸ್‌ ಗೌರವಾನ್ವಿತ ಅಧ್ಯಕ್ಷ ಎನ್‌.ಆರ್‌. ನಾರಾಯಣ ಮೂರ್ತಿ, ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು. 

"ಹೊಸ ಕಟ್ಟಡವನ್ನು 103 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡಿ 15 ಕಾರ್ಡಿಯಾಕ್‌ ಕ್ಯಾಥ್‌ ಲ್ಯಾಬ್‌ಗಳನ್ನು ಹೊಂದಿರುವ ಏಕೈಕ ಸರಕಾರಿ ಸಂಸ್ಥೆ ಜಯದೇವ ಹೃದ್ರೋಗ ಸಂಸ್ಥೆಯಾಗಿದೆ. ಹೃದಯದ ಚಿಕಿತ್ಸೆಯ ತುರ್ತುಸ್ಥಿತಿಗಳು ಮತ್ತು ಹೃದಯ ಆರೈಕೆಗಾಗಿ ಪ್ರತಿದಿನ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ನೂತನ ಕಟ್ಟಡ ನೆರವಾಗಲಿದೆ, ಆರ್ಥಿಕವಾಗಿ ದುರ್ಬಲರಾಗಿರುವ ಹೃದ್ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಇದರ ಉದ್ದೇಶ" ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

ಆರಂಭದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದ ಇನ್ಫೋಸಿಸ್‌ ಪ್ರತಿಷ್ಠಾನವು ಬಳಿಕ 350 ಹಾಸಿಗೆಗಳ ಸಾಮರ್ಥ್ಯದ ಬ್ಲಾಕ್‌ ಕಟ್ಟಿಸಿಕೊಟ್ಟಿದೆ. ಹೊಸ ಘಟಕದಲ್ಲಿ 350 ಹಾಸಿಗೆಗಳ ಪೈಕಿ 100 ಐಸಿಯು ಬೆಡ್‌ಗಳು, 250 ಜನರಲ್‌ ಬೆಡ್‌ಗಳಿರುತ್ತವೆ. ಎರಡು ಶಸ್ತ್ರಚಿಕಿತ್ಸೆ ಘಟಕಗಳು, ಎರಡು ಕಾರ್ಡಿಯಾಕ್‌ ಕ್ಯಾಥ್‌ಲ್ಯಾಬ್‌ಗಳು, ಒಂದು ಹೈಬ್ರಿಡ್‌ ಆಪರೇಷನ್‌ ಥಿಯೇಟರ್‌ ಕೂಡ ಇದೆ. ನೂತನ ಕಟ್ಟಡ ನಿರ್ಮಾಣವಾದ ಹಿನ್ನೆಲೆ ಜಯದೇವ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 1,050ಕ್ಕೆ ಏರಿಕೆಯಾಗಲಿದೆ. ಆ ಮೂಲಕ ಜಯದೇವ ಆಸ್ಪತ್ರೆಯು ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.