ಬೆಂಗಳೂರು ತಂತ್ರಜ್ಞಾನ ಶೃಂಗ ಸಮಾವೇಶಕ್ಕೆ ಇಂದು ವೆಂಕಯ್ಯ ನಾಯ್ಡು ಚಾಲನೆ: ನವೆಂಬರ್ 18ಕ್ಕೆ ಮೋದಿ ಭಾಷಣ
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಚಾಲನೆ ನೀಡಲಿದ್ದಾರೆ.

ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ವರ್ಷದ ಸಮಾವೇಶ ಇಂದಿನಿಂದ ಆರಂಭವಾಗಲಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಚಾಲನೆ ನೀಡಲಿದ್ದಾರೆ.
‘ಡ್ರೈವಿಂಗ್ ದಿ ನೆಕ್ಸ್ಟ್’ ಘೋಷ ವಾಕ್ಯದಡಿ ನಡೆಯಲಿರುವ ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ , ಐರೋಪ್ಯ ಒಕ್ಕೂಟ, ವಿಯೆಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನಟ್ ಮತ್ತು ಆಸ್ಪ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೇರಿದಂತೆ ಹಲವು ಗಣ್ಯರು ವರ್ಚುವಲ್ ರೂಪದಲ್ಲಿ ಭಾಗವಹಿಸಲಿದ್ದಾರೆ.
ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು, ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವರ್ಚುವಲ್ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ಈ ಶೃಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮೊದಲ ಬಾರಿಗೆ ಭಾರತೀಯ ನಾವೀನ್ಯತಾ ಮೈತ್ರಿಕೂಟ (ಜಿಐಎ) ಎಂಬ ಪರಿಕಲ್ಪನೆ ಅಳವಡಿಸಿಕೊಳ್ಳಲಾಗಿದ್ದು, ಇದರ ಭಾಗವಾಗಿ ಜರ್ಮನಿ, ಜಪಾನ್, ಫಿನ್ಲೆಂಡ್, ಲಿಥುವೇನಿಯಾ, ಸ್ವೀಡನ್, ಸ್ವಿಜರ್ಲೆಂಡ್ ಮುಂತಾದ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಬಿಟಿಎಸ್-2021ರ ಅಂಗವಾಗಿ ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿಗಳನ್ನು ಮತ್ತು 7 ಸಂವಾದಗಳನ್ನು ಏರ್ಪಡಿಸಲಾಗಿದೆ.
ಇವುಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಮೂಲಕ ನಾವೀನ್ಯತೆಯ ಬೆಳವಣಿಗೆ, ಫಿನ್‌ಟೆಕ್ ಭವಿಷ್ಯದ ಹೆಜ್ಜೆಗಳು, ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀಲತೆಯ ಸವಾಲುಗಳು, ಶೈಕ್ಷಣಿಕ ತಂತ್ರಜ್ಞಾನ, ಮುಂದಿನ ತಲೆಮಾರಿನ ವೈದ್ಯಕೀಯ ತಂತ್ರಜ್ಞಾನ, ವಂಶವಾಹಿ ಆಧಾರಿತ ಔಷಧಿಗಳು, ಜೀನ್ ಎಡಿಟಿಂಗ್, ಸೆಮಿಕಂಡಕ್ಟರ್, ಕ್ಯಾನ್ಸರ್ ಚಿಕಿತ್ಸೆ, , ಸೈಬರ್ ಸೆಕ್ಯುರಿಟಿ, ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಇನ್ನೂ ಜನ ಸಾಮಾನ್ಯರು ಕೂಡ ಈ ಸಮಾವೇಶದಲ್ಲಿ ವರ್ಚ್ಯೂವಲ್ ಆಗಿ ಭಾಗವಹಿಸಬಹುದಾಗಿದೆ, ಭಾಗವಹಿಸಲು ಆಸಕ್ತಿ ಉಳ್ಳವರು https://www.bengalurutechsummit.com/web/it_forms/registration-conference.php ಈ ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


