ಕೋವಿಡ್ ನಂತರ ರಾಜ್ಯದ ಆರೋಗ್ಯ ಮೂಲಸೌಕರ್ಯದಲ್ಲಿ ಮಹತ್ತರ ಪ್ರಗತಿ: ಸಚಿವ ಸುಧಾಕರ್
ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಮೂಲಸೌಕರ್ಯವನ್ನು ರಾಜ್ಯ ಸರ್ಕಾರ ಗಣನೀಯವಾಗಿ ಅಭಿವೃದ್ಧಿಪಡಿಸಿದೆ.

ಬೆಂಗಳೂರು: ದಿನಕ್ಕೆ ಒಂದೂವರೆ-ಎರಡು ಲಕ್ಷ ಕೋವಿಡ್ ಪರೀಕ್ಷೆ ನಡೆಸುವ ಸಾಮರ್ಥ್ಯ, 1,015 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯತೆ, 22 ಸಾವಿರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆ, ಅಗತ್ಯಕ್ಕೆ ತಕ್ಕಷ್ಟು ರೆಮ್ ಡಿಸಿವಿರ್ ಔಷಧಿ ಪೂರೈಕೆ ಸೇರಿದಂತೆ ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಮೂಲಸೌಕರ್ಯವನ್ನು ರಾಜ್ಯ ಸರ್ಕಾರ ಗಣನೀಯವಾಗಿ ಅಭಿವೃದ್ಧಿಪಡಿಸಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಹಿಂದೆಯೇ ಸೂಚನೆ ನೀಡಿದ್ದು, ಅದರಂತೆ ಎರಡೂ ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿಸಿ ಮೂಲಸೌಕರ್ಯ ಅಭಿವೃದ್ಧಿಪಡಿಸಿವೆ. ಇದರಿಂದಾಗಿ ಕೋವಿಡ್ ಎರಡನೇ ಅಲೆಯ ತೀವ್ರತೆಯನ್ನು ತಗ್ಗಿಸಲು, ರೋಗಿಗಳಿಗೆ ಸೂಕ್ತ ಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ.
ಪರೀಕ್ಷೆ ಹೆಚ್ಚಳ
ಫೆಬ್ರವರಿ ಅಂತ್ಯಕ್ಕೆ ದಿನಕ್ಕೆ 60-70 ಸಾವಿರ ಪರೀಕ್ಷೆ ನಡೆಸುತ್ತಿದ್ದು, ನಂತರ ಒಂದೂವರೆ ಲಕ್ಷಕ್ಕೆ ಏರಿಸಲಾಯಿತು. ಮೇ 22 ರವರೆಗೆ, 2.85 ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 2.38 ಕೋಟಿ ಪರೀಕ್ಷೆಗಳು ಆರ್ ರಿ-ಪಿಸಿಆರ್ ಟೆಸ್ಟ್ ಗಳಾಗಿವೆ. ಕೇಂದ್ರ ಸರ್ಕಾರ 70:30 ಅನುಪಾತದಲ್ಲಿ ಆರ್ ಟಿಪಿಸಿಆರ್ ಹಾಗೂ ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲು ಸೂಚಿಸಿದ್ದರೆ, ರಾಜ್ಯದಲ್ಲಿ ಶೇ.80%ಕ್ಕಿಂತ ಹೆಚ್ಚು ಪರೀಕ್ಷೆಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳಾಗಿವೆ. 2020 ರ ಫೆಬ್ರವರಿಯಲ್ಲಿ 2 ಲ್ಯಾಬ್ ಗಳಿದ್ದರೆ, ಈಗ 241 ಲ್ಯಾಬ್ ಗಳಿವೆ. (91 ಸರ್ಕಾರಿ, 150 ಖಾಸಗಿ).
ಹಾಸಿಗೆ ಸಾಮರ್ಥ್ಯ ಏರಿಕೆ
2020 ರ ಮಾರ್ಚ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ 1,970 ಆಕ್ಸಿಜನ್ ಹಾಸಿಗೆಗಳಿದ್ದು, 22,001 ಹೊಸದಾಗಿ ಅಳವಡಿಸಲಾಗಿದೆ. ಇದರಿಂದ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆ 23,971 ಕ್ಕೆ ಏರಿಕೆಯಾಗಿದೆ. 444 ಐಸಿಯು ಹಾಸಿಗೆ ಇದ್ದು, 701 ಹೊಸದಾಗಿ ಅಳವಡಿಸಲಾಗಿದೆ. ಇದರಿಂದ ಒಟ್ಟು ಐಸಿಯು ಹಾಸಿಗೆ ಸಂಖ್ಯೆ 1,145 ಕ್ಕೆ ಏರಿಕೆಯಾಗಿದೆ. 610 ವೆಂಟಿಲೇಟರ್ ಇದ್ದು, ಹೊಸದಾಗಿ 1,548 ಅಳವಡಿಸಿ ಒಟ್ಟು ಸಂಖ್ಯೆಯನ್ನು 2,158 ಕ್ಕೆ ಏರಿಸಲಾಗಿದೆ. ಹೊಸದಾಗಿ 1,248 ಎಚ್‍ಎಫ್‍ಎನ್ಸಿ ಹಾಸಿಗೆ ಅಳವಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ, 4,700 ಆಕ್ಸಿಜನ್ ಹಾಸಿಗೆಗಳಿದ್ದು, ಹೊಸದಾಗಿ 4,705 ಅಳವಡಿಸಲಾಗಿದೆ. ಇದರಿಂದ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆ 9,405 ಕ್ಕೆ ಏರಿಕೆಯಾಗಿದೆ. 341 ವೆಂಟಿಲೇಟರ್ ಇದ್ದು, ಹೊಸದಾಗಿ 305 ಅಳವಡಿಸಿ ಒಟ್ಟು ಸಂಖ್ಯೆಯನ್ನು 646 ಕ್ಕೆ ಏರಿಸಲಾಗಿದೆ. 15 ಎಚ್‍ಎಫ್‍ಎನ್ಸಿ ಹಾಸಿಗೆ ಇದ್ದು, 555 ಹೊಸದಾಗಿ ಅಳವಡಿಸಿದ್ದರಿಂದ ಒಟ್ಟು ಸಂಖ್ಯೆ 570 ಕ್ಕೆ ಏರಿಕೆಯಾಗಿದೆ. 151 ಕೆಎಲ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸೌಲಭ್ಯವಿದ್ದು, 73 ಕೆಎಲ್ ಅಳವಡಿಸಿ, ಒಟ್ಟು ಸಾಮರ್ಥ್ಯವನ್ನು 224 ಕೆಎಲ್ ಗೆ ಏರಿಸಲಾಗಿದೆ.
ವೈದ್ಯಕೀಯ ಆಮ್ಲಜನಕ
ರಾಜ್ಯದಲ್ಲಿ 815 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಸರ್ಕಾರದಿಂದ 1,015 ಟನ್ ಹಂಚಿಕೆಯಾಗಿದೆ. ಯಾದಗಿರಿ, ಕೆಜಿಎಫ್ ನಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಡಿಆರ್ ಡಿಒ ನೆರವಿನಲ್ಲಿ 1,000 ಎಲ್ ಪಿಎಂ ಸಾಮರ್ಥ್ಯದ ಮೂರು ಆಕ್ಸಿಜನ್ ಘಟಕಗಳನ್ನು ಸಿವಿ ರಾಮನ್ ಆಸ್ಪತ್ರೆ, ಕಲಬುರ್ಗಿ ಇಎಸ್‍ಐ ಮೆಡಿಕಲ್ ಕಾಲೇಜು, ಕೊಪ್ಪಳ ಮೆಡಿಕಲ್ ಸೈನ್ಸಸ್ ಸಂಸ್ಥೆಯಲ್ಲಿ ಆರಂಭಿಸಲಾಗುತ್ತಿದೆ. ಬಳ್ಳಾರಿಯಲ್ಲಿ 1,000 ಆಕ್ಸಿಜನ್ ಹಾಸಿಗೆಯುಳ್ಳ ಆಸ್ಪತ್ರೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವು 600 ಎಲ್‍ಪಿಎಂ ಸಾಮರ್ಥ್ಯದ 6 ಪಿಎಸ್‍ಎ ಘಟಕ ಆರಂಭಕ್ಕೆ ಅನುಮೋದನೆ ನೀಡಿದೆ. 10 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸುಮಾರು 1000 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆಯಾಗಿದೆ.
ರೆಮ್ ಡಿಸಿವಿರ್
5 ಲಕ್ಷ ವೈಲ್ಸ್ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಮೇ ನಲ್ಲಿ 51,360 ವೈಲ್ ಖರೀದಿಗೆ ಆದೇಶಿಸಿದ್ದು, 11,000 ದೊರೆತಿದೆ. ಸಿಎಸ್ಆರ್ ನಡಿ, 900 ವೈಲ್ ಪಡೆಯಲಾಗಿದೆ. ಕೇಂದ್ರ ಸರ್ಕಾರದಿಂದ 56,943 ವೈಲ್ ಪಡೆಯಲಾಗಿದೆ.
ಕೋವಿಡ್ ಲಸಿಕೆ
ರಾಜ್ಯದ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಗುರಿಯೊಂದಿಗೆ ಹಂತಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಮೇ 22 ರವರೆಗೆ, 1,20,14,015
ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಪೂರೈಸಿರುವ 1,13,26,340 ಡೋಸ್ ಜೊತೆಗೆ ರಾಜ್ಯ ಸರ್ಕಾರ ಖರೀದಿ ಮಾಡಲು ಮುಂದಾಗಿರುವ ಲಸಿಕೆಯಲ್ಲಿ 14,94,170 ಲಭ್ಯವಾಗಿದೆ.
"ಕೋವಿಡ್ ನಂತರದ ಕಾಲದಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆರ್ಥಿಕ ಸಂಕಷ್ಟವಿದ್ದರೂ ಹೆಚ್ಚು ಸಂಪನ್ಮೂಲವನ್ನು ಬಳಸಿ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಗಮನಹರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ 'ಆರೋಗ್ಯ ಕರ್ನಾಟಕ' ನಿರ್ಮಾಣ ಸಾಕಾರವಾಗಲಿದೆ". ಎಂದು ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


