ಕಾಸರಗೋಡು, ಮಂಜೇಶ್ವರದಲ್ಲಿ ಗ್ರಾಮಗಳ ಹೆಸರುಗಳ ಬದಲಾವಣೆ; ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ: ಸಿಎಂ
ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಕೇರಳ ಸರ್ಕಾರದ ನಡೆಯನ್ನು ಸಿಎಂ ಪ್ರಶ್ನಿಸಿದ್ದಾರೆ.

ಬೆಂಗಳೂರು: ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಕೇರಳ ಸರ್ಕಾರದ ನಡೆಯನ್ನು ಸಿಎಂ ಖಂಡಿಸಿದ್ದು, ಕೂಡಲೇ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಪತ್ರ ಬರೆಯುವುದಾಗಿ ಸಿಎಂ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ ರವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಹೆಸರು ಬದಲಾವಣೆ ಮಾಡುತ್ತಿರುವುದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ವಿಷಯವು ತಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು, ಕೂಡಲೇ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಪರಸ್ಪರ ಸಹಬಾಳ್ವೆಯಿಂದ ಸಹೋದರರಂತೆ ಬದುಕನ್ನು ನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂಬ ವಿಷಯವನ್ನು ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮಗಳ ಹೆಸರುಗಳ ಬದಲಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ಕೇರಳ ಸರ್ಕಾರದ ಗಮನಕ್ಕೆ ಬಾರದೆಯೇ ಕೇವಲ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ನಡೆದಿರಬಹುದೆಂಬ ವಿಷಯವನ್ನು ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


