ಆರ್ ಎನ್ ಆರ್ ತಳಿ ಭತ್ತದ ಬೆಳೆ; ರೈತರ ಮೊಗದಲ್ಲಿ ಮಂದಹಾಸ
ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ಕಾಣದೇ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹೊಸದಾಗಿ ಪರಿಚಯಿಸಿಕೊಟ್ಟ ಆರ್ ಎನ್ ಆರ್-15048 ಭತ್ತದ ತಳಿಯಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಾಮರಾಜನಗರ: ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ಕಾಣದೇ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹೊಸದಾಗಿ ಪರಿಚಯಿಸಿಕೊಟ್ಟ ಆರ್ ಎನ್ ಆರ್-15048 ಭತ್ತದ ತಳಿಯಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈಕೆಮೊಳೆ ಮತ್ತು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನೂರು ಜನ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹೈದರಾಬಾದ್ ಹಾಗೂ ತೆಲಂಗಾಣದಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ದಪಡಿಸಿರುವ ಆರ್ ಎನ್ ಆರ್ -15048 ಎನ್ನುವ ಭತ್ತದ ತಳಿಯನ್ನು ಪರಿಚಯಿಸಿಕೊಟ್ಟಿದೆ. ಇದೊಂದು ಅಲ್ಪಾವಧಿ ಬೆಳೆಯ ತಳಿಯಾಗಿದ್ದು, ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
ಆರ್ ಎನ್ ಆರ್-15048 ತಳಿಯು ರೋಗ ನಿರೋಧಕ ಹಾಗೂ ಇತರೆ ರೋಗಗಳನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ಇದು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯಲಿದೆ. ಧಾನ್ಯದ ಗುಣಮಟ್ಟ ಮತ್ತು ಅಕ್ಕಿಯ ಗುಣಮಟ್ಟ ಬೇರೆ ತಳಿಗಳಿಗಿಂತ ಉತ್ತಮವಾಗಿದೆ. ಆರ್ ಎನ್ ಆರ್ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯಲಿದ್ದಾರೆ. ಅಲ್ಲದೆ ಈ ತಳಿಯ ಒಂದು ಕ್ವಿಂಟಾಲ್ ಭತ್ತದಿಂದ ಸುಮಾರು 65 ಕೆ.ಜಿಯಷ್ಟು ಅಕ್ಕಿ ಉತ್ಪಾದನೆಯಾಗಲಿದೆ. ಮಾರುಕಟ್ಟೆಯಲ್ಲಿ ಈ ತಳಿಯ ಒಂದು ಕ್ವಿಂಟಾಲ್ ಭತ್ತವನ್ನು 1820 ರೂ. ಗೆ ರೈತರು ನೇರವಾಗಿ ಮಾರಾಟ ಮಾಡುತ್ತಿರುವು ವಿಶೇಷ.
ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಪರಿಚಯಿಸಿರುವ ಆರ್ ಎನ್ ಆರ್ -15048 ತಳಿಯು ಕೇವಲ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೆ, ಮಣ್ಣಿನ ಗುಣಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಯಲ್ಲಿ ಸುಮಾರು 40 ಕ್ವಿಂಟಾಲ್ ಇಳುವರಿಯನ್ನು ತೆಗೆಯಬಹುದಾಗಿದೆ. ಆದರೆ ಮಣ್ಣಿ ಸಾರ ಕಡಿಮೆ ಹಾಗೂ ಕಪ್ಪು ಮಣ್ಣು ಪ್ರದೇಶದಲ್ಲಿ ಒಂದು ಎಕರೆಗೆ ಸುಮಾರು 25 ರಿಂದ 30 ಕ್ವಿಂಟಾಲ್ ಇಳುವರಿ ಲಭ್ಯವಾಗಲಿದೆ. ಇದಕ್ಕೆ ಯಾವುದೇ ರೋಗಗಳು ಭಾದಿಸುವುದಿಲ್ಲ.
ಈ ತಳಿಗೆ ಯಾವುದೇ ರೀತಿಯಾದ ರೋಗಗಳು ಬರುವುದಿಲ್ಲ. 125 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದೆ. ಇತರ ತಳಿ ಭತ್ತ ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಒಂದು ಎಕರೆಗೆ ಸುಮಾರು 7 ರಿಂದ 8 ಸಾವಿರ ರೂ.ಗಳವರೆಗೆ ಖರ್ಚಾಗುತ್ತಿತ್ತು. ಆದರೆ ಸಮಗ್ರ ಭತ್ತದ ಬೆಳೆ ಪದ್ದತಿಯಲ್ಲಿ ಆರ್ ಎನ್ ಆರ್ ತಳಿಯ ಭತ್ತ ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಕೇವಲ 1 ರಿಂದ 2 ಸಾವಿರ ರೂ.ಗಳವರೆಗೆ ಖರ್ಚಾಗಲಿದೆ.
ಬೇರೆ ತಳಿ ಭತ್ತದ ಬೆಳೆಯಲ್ಲಿ ಸುಮಾರು 15 ರಿಂದ 20 ಕ್ವಿಂಟಾಲ್ ಇಳುವರಿ ಬಂದರೆ ಹೆಚ್ಚಿತ್ತು. ಆರ್ ಎನ್ ಆರ್ ತಳಿಯ ಬಗ್ಗೆ ಈ ಬಾರಿ ತರಬೇತಿ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆ ಕೊಟ್ಟಿರುವುದರಿಂದ 25 ಕ್ವಿಂಟಾಲ್ ಗಳಷ್ಟು ಇಳುವರಿ ಬಂದಿದೆ. ಇದರಿಂದ ರೈತರಿಗೆ ಮತ್ತು ನಮಗೂ ಹೆಚ್ಚು ಸಂತಸವಾಗಿದೆ ಎಂದು ಹರದನಹಳ್ಳಿ ಕೃಷಿವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಸುನಿಲ್ ಹಾಗೂ ಭತ್ತದ ತಳಿ ವಿಜ್ಞಾನಿ ರಾಜಣ್ಣ ಹೇಳುತ್ತಾರೆ.
ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ನಮಗೆ ಆರ್ ಎನ್ ಆರ್ ತಳಿಯನ್ನು ಪರಿಚಯಿಸಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಬಿತ್ತನೆ ಮಾಡಿದ ಪರಿಣಾಮ ಇಂದು ಭತ್ತದ ಇಳುವರಿ ಹೆಚ್ಚಾಗಿದೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ. ಹಿಂದೆ ನಾವು ಒಂದು ಎಕರೆಗೆ 15 ರಿಂದ 16 ಕ್ವಿಂಟಾಲ್ ಭತ್ತವನ್ನು ಬೆಳೆಯುತ್ತಿದ್ದೆವು. ಆರ್ ಎನ್ ಆರ್ ಪರಿಚಯಿಸಿದ ಕಾರಣ ಈಗ ಒಂದು ಎಕರೆಗೆ 25 ರಿಂದ 26 ಕ್ವಿಂಟಾಲ್ ಬೆಳೆಯುತ್ತಿದ್ದೇವೆ. ಇದರಿಂದ ನಮಗೆ ಖರ್ಚು ಕೂಡ ಕಡಿಮೆಯಾಗಿದೆ. ಇಳುವರಿ ಹೆಚ್ಚಾಗಿದೆ. ಹೀಗಾಗಿ ಈ ತಳಿಯನ್ನು ಹೆಚ್ಚು ರೈತರು ಅಳವಡಿಸಿಕೊಂಡರೆ ಹೆಚ್ಚಿನ ಅನುಲಕೂಲವಾಗಲಿದೆ ಎನ್ನುವುದು ರೈತರ ಮನದಾಳದ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


