ರಾಮಕೃಷ್ಣ ಹೆಗಡೆ ಅವರ ಜೀವನ, ಕೊಡುಗೆ ನಮಗೆ ಸದಾ ಆದರ್ಶಪ್ರಾಯ: ಸಿಎಂ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ದಿವಂಗತ ರಾಮಕೃಷ್ಣ ಹೆಗಡೆ ಅವರ 95ನೇ ಜನ್ಮದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ದಿವಂಗತ ರಾಮಕೃಷ್ಣ ಹೆಗಡೆ ಅವರ 95ನೇ ಜನ್ಮದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.
"ಕರ್ನಾಟಕದಲ್ಲಿ ದೀರ್ಘಕಾಲದ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗಡೆಯವರು ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದರು. ಕೇಂದ್ರದಲ್ಲಿ ವಿಪಿ ಸಿಂಗ್ ನೇತ್ರತ್ವದ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು" ಎಂದು ಬೊಮ್ಮಾಯಿ ಹೆಗಡೆಯವರ ನಾಯಕತ್ವವನ್ನು ಬಣ್ಣಿಸಿದ್ದಾರೆ
"ಹೆಗಡೆಯವರ ಜೊತೆ ನನ್ನ ತಂದೆ ಎಸ್. ಆರ್. ಬೊಮ್ಮಾಯಿ ಅವರ ಸ್ನೇಹ ಸಂಬಂಧ ಅವರ ಜೀವನದ ಅಂತ್ಯದ ವರೆಗೂ ಇತ್ತು. ಹೆಗಡೆಯವರ ಸಂಪುಟದಲ್ಲಿ ಸಚಿವರಾಗಿ ಜನತಾದಳವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಹೆಗಡೆಯವರು ಮತ್ತು ಬೊಮ್ಮಾಯಿಯವರು ಅವಿಶ್ರಾಂತವಾಗಿ ಶ್ರಮಿಸಿದ್ದರು."
"ಹೆಗಡೆಯವರು ರಾಜ್ಯ ಕಂಡ ಮುತ್ಸದ್ದಿ ನಾಯಕರು. ಮೌಲ್ಯಾಧಾರಿತ ರಾಜಕೀಯದ ಪ್ರವರ್ತಕರು. ದಕ್ಷ ಆಡಳಿತಕ್ಕೆ, ಪ್ರಾಮಾಣಿಕತೆಗೆ ಅವರು ಮಾದರಿ. ಹೆಗಡೆಯವರ ಕೊಡುಗೆ ರಾಜ್ಯಕ್ಕೆ ಅಪಾರ. ಮುಖ್ಯವಾಗಿ ಆಡಳಿತ ವಿಕೇಂದ್ರೀಕರಣಕ್ಕೆ ಅವರು ಮಾಡಿದ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಅನುಕರಣೀಯ ವೆಂದು ಪ್ರಶಂಸೆಗೆ ಪಾತ್ರವಾಗಿದೆ. ನನ್ನ ತಂದೆಯವರೊಂದಿಗೆ ಹೆಗಡೆಯವರ ಸಂಬಂಧ ಅವಿಸ್ಮರಣೀಯ. ಅತ್ಯಂತ ಧನ್ಯತೆಯಿಂದ ಸ್ಮರಿಸಿ ಕೊಳ್ಳುತ್ತೇನೆ." ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
"ರಾಮಕೃಷ್ಣ ಹೆಗಡೆ ಅವರ ಜೀವನ ಮತ್ತು ಕೊಡುಗೆ ನಮಗೆ ಸದಾ ಆದರ್ಶಪ್ರಾಯ. ರಾಜ್ಯದ ಅಭಿವೃದ್ಧಿಗೆ ಅವರು ಹಾಕಿಕೊಟ್ಟ ಮಾರ್ಗವೇ ನಮ್ಮ ಸಂಕಲ್ಪವಾಗಿರುತ್ತದೆ"
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


