ಮಂಗಳೂರು: ವೀಸಾ ವಿಸ್ತರಣೆ, ನಿರಾಶ್ರಿತರ ಸ್ಥಾನಮಾನ ನೀಡುವಂತೆ ಸರ್ಕಾರಕ್ಕೆ ಅಫ್ಘನ್ ವಿದ್ಯಾರ್ಥಿಗಳ ಮನವಿ
ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡಿದ್ದು, ರಾಷ್ಟ್ರದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಹೀಗಾಗಿ ಪ್ರಸ್ತುತದ ಪರಿಸ್ಥಿತಿಯಲ್ಲಿ ರಾಷ್ಟ್ರಕ್ಕೆ ಹಿಂತಿರುಗುವುದು ಅಸಾಧ್ಯವಾಗಿದ್ದು, ವೀಸಾ ವಿಸ್ತರಣೆ ಮಾಡಿ, ನಿರಾಶ್ರಿತರ ಸ್ಥಾನಮಾನ ನೀಡುವಂತೆ ಮಂಗಳೂರಿನಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು: ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡಿದ್ದು, ರಾಷ್ಟ್ರದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಹೀಗಾಗಿ ಪ್ರಸ್ತುತದ ಪರಿಸ್ಥಿತಿಯಲ್ಲಿ ರಾಷ್ಟ್ರಕ್ಕೆ ಹಿಂತಿರುಗುವುದು ಅಸಾಧ್ಯವಾಗಿದ್ದು, ವೀಸಾ ವಿಸ್ತರಣೆ ಮಾಡಿ, ನಿರಾಶ್ರಿತರ ಸ್ಥಾನಮಾನ ನೀಡುವಂತೆ ಮಂಗಳೂರಿನಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು ವಿವಿ, ಸುರತ್ಕಲ್ ಎನ್ ಐಟಿಕೆ ಕಾಲೇಜು ಮತ್ತು ಅಲೋಶಿಯಸ್ ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ನಿನ್ನೆಯಷ್ಟೇ ಮಂಗಳೂರು ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿ ಮಾಡಿದರು.
ಮಂಗಳೂರಿನಲ್ಲಿ ಅಧ್ಯಯನ ನಡೆಸುತ್ತಿರುವ ಕೆಲವು ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳುತ್ತಿದೆ. ಅದನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿಕೊಂಡರು.
ಅಫ್ಘಾನ್ ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖರಾದ ನಾಸಿರ್ ಅಹ್ಮದ್ ಮಾತನಾಡಿ, ಮಂಗಳೂರಿನಲ್ಲಿರುವ ಅಫ್ಘಾನ್ ವಿದ್ಯಾರ್ಥಿಗಳ ಬಗ್ಗೆ ಪೊಲೀಸ್ ಕಮಿಷನರ್ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಸುಮಾರು 15 ವರ್ಷಗಳಿಂದ ಅಫ್ಘಾನ್'ನ ಹಲವಾರು ವಿದ್ಯಾರ್ಥಿಗಳು ಮಂಗಳೂರು ನಗರಕ್ಕೆ ಉನ್ನತ ವ್ಯಾಸಾಂಗಕ್ಕಾಗಿ ಆಗಮಿಸುತ್ತಿದ್ದಾರೆ. ಭಾರತದ ಬಗ್ಗೆ ಅಫ್ಘಾನ್ ವಿದ್ಯಾರ್ಥಿಗಳು ಹಾಗೂ ಕುಟುಂಬದವರಿಗೆ ಅಪಾರವಾದ ಗೌರವವಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೇಂದ್ರ ಸರ್ಕಾರವೂ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಅಲ್ಲಿರುವ ತಮ್ಮ ಕುಟುಂಬಗಳ ಬಗ್ಗೆ ಆತಂಕಿತರಾಗಿದ್ದೇವೆ. ಪೊಲೀಸರು ಇಲಾಖೆಯಿಂದ ನಮಗೆ ಸುರಕ್ಷತೆಯ ಭರವಸೆ ದೊರಕಿದೆ ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಶಿಕುಮಾರ್ ಅವರು, ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು, ಸೆಪ್ಟಂಬರ್ ತಿಂಗಳಲ್ಲಿ ವೀಸಾ ಅವಧಿ ಮುಗಿದವರಿಗೆ ಆರು ತಿಂಗಳಿಗೆ ವಿಸ್ತರಣೆ ಮಾಡಲಾಗುವುದು. 58 ಮಂದಿಯ ಪೈಕಿ 11 ಜನ ಅಫ್ಘಾನಿಸ್ತಾನಕ್ಕೆ ತೆರಳಿದ್ದು, ಅವರು ತಮ್ಮ ವ್ಯಾಸಂಗ ಮುಂದುವರಿಸಲು ಬಯಸಿದರೆ ಭಾರತ ಸರ್ಕಾರ ಅವಕಾಶ ನೀಡಲಿದೆ. ಯಾರಾದರೂ ತಮ್ಮ ದೇಶಕ್ಕೆ ತೆರಳಿ ಕುಟುಂಬಸ್ಥರ ಜೊತೆಗಿರಬೇಕು ಎಂದು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗುವುದು. ಇಲ್ಲಿಯೇ ಉಳಿದುಕೊಳ್ಳಲು ಬಯಸಿದರೆ ರೆಫ್ಯುಜಿ ಸ್ಟೇಟಸ್ (ನಿರಾಶ್ರಿತರು) ಅಡಿ ಉಳಿಸಲಾಗುವುದು. ಅಲ್ಲದೆ, ಅಫ್ಘನ್ ಸ್ಥಿತಿ ಸುಧಾರಣೆ ಆಗೋವರೆಗೆ ಇಲ್ಲಿ ಕೆಲಸ ಮಾಡಲು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗುತ್ತದೆ. ಪ್ರಸ್ತುತ ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಿದ್ದು, ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


