ರಾಜ್ಯ

ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ: 30 ಅಧಿಕಾರಿಗಳ ಎತ್ತಂಗಡಿ ಮಾಡಿದ ಬಸವರಾಜ ಹೊರಟ್ಟಿ

ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ಕರ್ನಾಟಕ ವಿಧಾನ ಪರಿಷತ್ತಿನ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಡಳಿತ ಯಂತ್ರಕ್ಕೆ ಚುರುಕು ನೀಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ.

ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ: 30 ಅಧಿಕಾರಿಗಳ ಎತ್ತಂಗಡಿ ಮಾಡಿದ ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Published On :

ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ಕರ್ನಾಟಕ ವಿಧಾನ ಪರಿಷತ್ತಿನ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಡಳಿತ ಯಂತ್ರಕ್ಕೆ ಚುರುಕು ನೀಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತ ತಮ್ಮದೇ ಹಿಡಿತ ಹಾಗೂ ಪ್ರಭುತ್ವ ಸಾಧಿಸಿದ್ದ ಹಲವರನ್ನು ಬೇರೆಡೆಗೆ ವರ್ಗಾಯಿಸಿ ವಿಧಾನ ಪರಿಷತ್ತಿನ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆ ಮೂಡಿಸುವಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಯಶಸ್ವಿಯಾಗಿದ್ದು ಈ ಕ್ರಮ ಸಚಿವಾಲಯದ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ಈ ಕುರಿತು ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದ್ದು ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಶಾಖಾಧಿಕಾರಿಗಳು, ಹಿರಿಯ ಸಹಾಯಕರು, ಸಹಾಯಕರು ಮತ್ತು ಕಿರಿಯ ಸಹಾಯಕರನ್ನೊಳಗೊಂಡ 30 ಜನರನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ.

ಪರಿಷತ್ ಸಚಿವಾಲಯದ ಕಾರ್ಯ ನಿರ್ವಹಣೆಯಲ್ಲಿ ವ್ಯಾಪಕ ಬದಲಾವಣೆ ಅವಶ್ಯಕತೆ ಇದೆ ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತಾದರೂ ಈ ಕುರಿತು ಯಾರೂ ಸಹ ಈ ಪ್ರಮಾಣದಲ್ಲಿ ಕ್ರಮ ಕೈಗೊಂಡಿರಲಿಲ್ಲ. ಹಲವಾರು ಪ್ರಭಾವಿಗಳ ಕೃಪಾಶೀರ್ವಾದ, ಒತ್ತಡ ಮೊದಲಾದ ಕಾರಣಗಳಿಂದ ಹಲವು ಸಿಬ್ಬಂದಿ ಸಚಿವಾಲಯದ ಆಯಕಟ್ಟಿನ ಸ್ಥಳಗಳಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅಂತಹ ಕೆಲ ಸಿಬ್ಬಂದಿಗಳ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದವು. ಇವೆಲ್ಲವುಗಳನ್ನು ಪರಿಗಣಿಸಿ ಸಭಾಪತಿ ಬಸವರಾಜ ಹೊರಟ್ಟಿ ಮಿಂಚಿನ ಕಾರ್ಯಾಚರಣೆ ನಡೆಸಿ ದಿಢೀರನೆ 30 ಜನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು ಸಚಿವಾಲಯದ ಕೆಲ ಸಿಬ್ಬಂದಿಗಳಲ್ಲಿ ಸಂತಸ ಮೂಡಿಸಿದ್ದರೆ ಕೆಲವರಲ್ಲಿ ಆತಂಕ ಉಂಟು ಮಾಡಿದೆ.

ಕಳೆದ ನಾಲ್ಕು ದಶಕಗಳಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಶಿಕ್ಷಣ ಸಚಿವರಾಗಿ ಈಗ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಧಾನ ಪರಿಷತ್ತಿನಲ್ಲಿ ಹಲವು ವಿನೂತನ ಹಾಗೂ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಚಿವಾಲಯದ ಬಗೆಗೆ ಇರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಂತಹ ಆರೋಪಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ನಿರತರಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಕುರಿತ ದೂರಿಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಸರಕಾರದ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 

ಪರಿಷತ್ತಿನ ಗೌರವ, ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿಧಾನ ಪರಿಷತ್ ಸದಸ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆಯ ಪ್ರಾಮುಖ್ಯತೆ ಹಾಗೂ ಅದರ ಘನತೆ ಹೆಚ್ಚಿಸಲು ಅಗತ್ಯ ಸುಧಾರಣೆಗಳನ್ನು ಕೈಗೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ವಿನೂತನ ಪ್ರಯತ್ನ ನಡೆಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕ್ರಮ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.