ಶಿರಾ ಉಪಚುನಾವಣೆ: ವೋಟಿಗಾಗಿ ನೋಟುಗಳ ಸುರಿಮಳೆ; ವಿಡಿಯೋ ವೈರಲ್
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಈ ನಡುವಲ್ಲೇ ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಈ ನಡುವಲ್ಲೇ ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವ್ಯಕ್ತಿಗಳು ಬಿಜೆಪಿ ಅಭ್ಯರ್ಥಿಗಳ ಪರವಾಗಿರುವ ಬೆಂಬಲಿಗರೆಂದು ಹೇಳಲಾಗುತ್ತಿದೆ. ಇದೇ ರೀತಿಯ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಬೆಂಬಲಿಗರಾಗಿದ್ದಾರೆಂದು ಹೇಳಲಾಗುತ್ತಿದೆ.
ವೀರಪುರ ಮತ್ತು ಸಿದ್ದಾಪುರದಲ್ಲಿ ಕೆಲ ಮಹಿಳಾ ಮತದಾರರಿಗೆ ಅರಿಶಿಣ ಮತ್ತು ಕುಟುಂಬ ನೀಡಿ ಇಂದು ನಾವು ನಿಮಗೆ ರೂ.200 ನೀಡುತ್ತಿದ್ದೇವೆ. ಪ್ರತಿ ಚುನಾವಣೆಯಲ್ಲಿ ಬರೀ ಗಂಡಸರಿಗೆ ಕೈಗೆ ಹಣ ಕೊಟ್ಟು ಹೋಗುತ್ತಾರೆ. ತಾಯಂದಿರಿಗೆ ಏನೂ ಕೊಡಲ್ಲ ಮರೆತು ಹೋಗುತ್ತಾರೆ. ಇವತ್ತು ರೂ. 200 ಕೊಡ್ತಿವಿ, ನಾಳೆ, ಆಚೆ ನಾಳಿದ್ದು ಕೊಡ್ತಿವಿ. ಚುನಾವಣೆ ಹಿಂದಿನ ದಿನನೂ ಕೊಡೋದನ್ನು ಕೊಡ್ತೀವಿ. ದುಡ್ಡು ತಗೊಂಡು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಂಡು ಬಂದಿದೆ.
ಪ್ರಚಾರ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ದಾರಿಯಲ್ಲಿ ಹೋಗುವ ವೇಳೆ ಇದ್ದಕ್ಕಿದ್ದಂತೆ ಬಂದು ಹಣ ನೀಡಿ ಹೋಗುತ್ತಾರೆ. ಆದರೆ, ನೀವು ಕಮಲಕ್ಕೆ ಮತ ಹಾಕಿ ಎಂದಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷದ ಸಲಹೆಗಾರ ಜಿ ರಘು ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕ್ಷೇತ್ರಕ್ಕೆ ಶಾಸಕರು ಹಾಗೂ ಅವರ ಬೆಂಬಲಿಗರು ಭೇಟಿಯನ್ನು ನಿರ್ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅಂಗನಾವಾಡಿ, ಸ್ತ್ರೀಶಕ್ತಿ ಹಾಗೂ ಆಶಾ ಕಾರ್ಯಕರ್ತರಿಗೆ ಹಣವನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರು ಮಾತನಾಡಿ, ವಿಡಿಯೋವನ್ನು ಬಿಜೆಪಿ ಕಾರ್ಯಕರ್ತರೇ ಮಾಡಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನೇ ನಾವು ಸಾಕ್ಷಿಯಾಗಿ ಬಳಸಿಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆಂದು ಹೇಳಿದ್ದಾರೆ.
ಉಪ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್ ಅವರು ಮಾತನಾಡಿ, ಹಣ ವಿತರಣೆ ಮಾಡಿರುವುದರ ವಿರುದ್ಧ ಶೀಘ್ರದಲ್ಲೇ ಎಫ್ಐಆರ್ ದಾಖಲಾಗಲಿದೆ ಎಂದು ಹೇಳಿದ್ದಾರೆ.
ಇದರಂತೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೂಡ ಶಿರಾದಲ್ಲಿ ಮಂಗಳವಾರ ಪ್ರಚಾರ ನಡೆಸಿದ್ದು, ಈ ವೇಳೆ ಭಾಷಣದಲ್ಲಿ ಹಣ ವಿತರಣೆ ಮಾಡಿರುವುದರ ಕುರಿತು ಮಾತನಾಡಿದ್ದರು. ಹಣ ನೀಡುವುದರ ಬದಲಿಗೆ ನಾನು ರೂ.900 ಕೋಟಿ ಯೋಜನೆಯನ್ನು ಘೋಷಣೆ ಮಾಡಿದ್ದೆ. ನೀವೇಕೆ ಕೃಷ್ಣ ಮೇಲ್ದಂಡೆ ಯೋಜನೆಯನ್ನು ಕಾರ್ಯಗತಗೊಳಿಸಬಾರದು, 67 ಟ್ಯಾಂಕ್‌ಗಳನ್ನು ನೀರಿನಿಂದ ತುಂಬಿಸಬಾರದು ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ, ವಿಕಲಚೇತನರು ಮತ್ತು ಅನಾರೋಗ್ಯ ಪೀಡಿತ ಹಿರಿಯ ನಾಗರೀಕರ 5,000 ಮತಗಳನ್ನು ಖರೀದಿಸಿದ ಆರೋಪಗಳು ಕೇಳಿ ಬರುತ್ತಿವೆ. ಅಕ್ಟೋಬರ್ 22 ರಿಂದ ಮತದಾನವನ್ನು ಪ್ರಾರಂಭಿಸಲಾಗಿದ್ದು, ಅಕ್ಟೋಬರ್ 30 ಮತದಾನ ಅಂತ್ಯಗೊಳ್ಳಲಿದೆ. ಇತರೆ ಚುನಾವಣೆಗಳಾವುದರಲ್ಲೂ ಇಂತಹ ವ್ಯವಸ್ಥೆ ಜಾರಿಗೊಂಡಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿಯೇ ಏಕೆ ಪರಿಚಯಿಸಲಾಗಿದೆ? ಇದು ಆಡಳಿತ ಪಕ್ಷಕ್ಕೆ ಅನುಕೂಲವೆಂದು ಸಾಬೀತುಪಡಿಸುತ್ತದೆ ಎಂದು ಜವಾನಹಳ್ಳಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಈಶ್ವರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


