ಹಸಿರು ಪಟಾಕಿಗಳ ಮಾರಾಟ 10 ದಿನ ಮಾತ್ರ ಅವಕಾಶ: ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ಈ ಬಾರಿ ದೀಪಾವಳಿಗೆ ಹಸಿರು ಪಟಾಕಿಗಳನ್ನು ಹೊತ್ತಿಸಲು ಅವಕಾಶ ನೀಡಿದ ನಂತರ ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಬೆಂಗಳೂರು: ಈ ಬಾರಿ ದೀಪಾವಳಿಗೆ ಹಸಿರು ಪಟಾಕಿಗಳನ್ನು ಹೊತ್ತಿಸಲು ಅವಕಾಶ ನೀಡಿದ ನಂತರ ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಕೋವಿಡ್-19 ಶಿಷ್ಟಾಚಾರದ ಮಧ್ಯೆ, ನವೆಂಬರ್ 7ರಿಂದ 16ರವರೆಗೆ ಮಾತ್ರ ಪಟಾಕಿಗಳ ಮಾರಾಟಕ್ಕೆ ಅವಕಾಶವಿದೆ. ಸರ್ಕಾರದ ಹೊಸ ಮಾರ್ಗಸೂಚಿಯನ್ನು ನಿನ್ನೆ ಬಿಡುಗಡೆಗೊಳಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್, ಜಿಲ್ಲಾಧಿಕಾರಿಗಳು, ಎಸ್ಪಿಗಳು, ಬೆಂಗಳೂರು ಸಿಟಿ ಪೊಲೀಸ್ ಆಯುಕ್ತರು, ಬಿಬಿಎಂಪಿಗಳಿಗೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಪಟಾಕಿಗಳ ಮಾರಾಟವನ್ನು 17 ದಿನಗಳಿಂದ 10 ದಿನಗಳಿಗೆ ಇಳಿಸಿರುವ ರಾಜ್ಯ ಸರ್ಕಾರ, ಅಂಗಡಿಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ಕೊಟ್ಟಿದೆ. ಪಟಾಕಿ ಮಾರಾಟಗಾರರು ಮಾರಾಟ ಮಾಡುವ ಸ್ಥಳದಲ್ಲಿ ಸಾಕಷ್ಟು ಗಾಳಿ ಬೆಳಕು ಹೊಂದಿರಬೇಕು, ಅಂಗಡಿಯನ್ನು ಪ್ರತಿದಿನ ಸ್ಯಾನಿಟೈಸ್ ಮಾಡುತ್ತಿರಬೇಕು, ಥರ್ಮಲ್ ಸ್ಕ್ರೀನಿಂಗ್ ಮತ್ತು ಗ್ರಾಹಕರಿಗೆ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳುವ ವ್ಯವಸ್ಥೆ ಇಟ್ಟಿರಬೇಕು. ಮಾರಾಟಗಾರರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪಟಾಕಿ ಮಾರುವ ಅಂಗಡಿಗಳ ಮಧ್ಯೆ ಕನಿಷ್ಠ 6 ಮೀಟರ್ ಅಂತರವಿರಬೇಕು ಎಂದು ನಿಯಮ ಹೇಳುತ್ತದೆ.
ಆದರೂ ಕೂಡ ಪಟಾಕಿ ಹಚ್ಚುವ ಸಮಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ, ಜನರು ಸುರಕ್ಷತೆ ಪಾಲಿಸುವುದು ಕಡಿಮೆಯಾಗಬಹುದು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಸ್ತೃತ ವರದಿಯನ್ನು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಪರವಾನಗಿ ನೀಡುವ ಅಧಿಕಾರಿಗಳು ಮತ್ತು ಗ್ರಾಹಕರು ಅನುಮೋದನೆ ಪಡೆದ ಪಟಾಕಿಗಳನ್ನು ಖಚಿತಪಡಿಸಿಕೊಳ್ಳಲು ಈ ವರ್ಷ ತಂತ್ರಜ್ಞಾನ-ನೆರವಿನ ಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


