ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇದೆಯೇ? ದೀಪಾವಳಿ ಹತ್ತಿರ ಬಂದಿದೆ, ಪಟಾಕಿ ಹೊಡೆಯುವುದಕ್ಕೂ ಮುನ್ನ ಎಚ್ಚರವಿರಲಿ!
ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡಿದ್ದೀರಾ...? ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದಕ್ಕೂ ಮುನ್ನ ಒಂದಲ್ಲ ಎರಡು ಬಾರಿ ಆಲೋಚಿಸಿ...

ಬೆಂಗಳೂರು: ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡಿದ್ದೀರಾ...? ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದಕ್ಕೂ ಮುನ್ನ ಒಂದಲ್ಲ ಎರಡು ಬಾರಿ ಆಲೋಚಿಸಿ...
ದೀಪಾವಳಿ ಹತ್ತಿರ ಬರುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಹಸಿರು ಪಟಾಕಿಗಳಿಗಷ್ಟೇ ಅನುಮತಿ ನೀಡಿದೆ. ಈ ನಡುವೆ ವೈದ್ಯರು ಕೂಡ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡಿರುವ ಜನರು ಬಹಳಷ್ಟು ಜಾಗರೂಕವಾಗಿರುವಂತೆ ಎಚ್ಚರ ನೀಡಿದ್ದಾರೆ.
ಕೊರೋನಾ ಸೋಂಕಿಗೊಳಗಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸಾಕಷ್ಟು ಜನರು ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿ ಮಾಡಿದ್ದಾರೆ. ಕೆಲವರು ಬಾಡಿಗೆಗೆ ಪಡೆದುಕೊಂಡಿದ್ದಾರೆ. ದೀಪಾವಳಿ ಹತ್ತಿರ ಬರುತ್ತಿರುವುದರಿಂದ ಇಂತಹ ಸಂದರ್ಭದಲ್ಲಿ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಪಟಾಕಿ ಹೊಡೆಯುವ ವೇಳೆ ಸಣ್ಣಪುಟ್ಟ ತಪ್ಪುಗಳಾದರೂ ಆಕ್ಸಿಜನ್ ಸಿಲಿಂಡರ್ ಗಳು ಬಾಂಬ್ ರೀತಿ ಸ್ಫೋಟಗೊಳ್ಳುವ ಸಾಧ್ಯತೆಗಳಿರುತ್ತವೆ.
ಮಣಿಪಾಲ್ ಆಸ್ಪತ್ರೆಗಳ ಹಿರಿಯ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಮೈಸೂರು ಅವರು ಮಾತನಾಡಿ, ಆಮ್ಲಜನಕ ಸುಡುವುದಿಲ್ಲ, ಆದರೆ, ಬೆಂಕಿ ಹೊತ್ತುಕೊಂಡಾಗ ಕೆನ್ನಾಲಿಗೆ ಹೆಚ್ಚಾಗುವಂತೆ ಮಾಡುತ್ತದೆ. ಮನೆಯಲ್ಲಿ ಆಮ್ಲಜನಕ ಸಿಲಿಂಡರ್ ಗಳಿದ್ದರೆ, ಒಂದು ವೇಳೆ ಮೂರು ಮೀಟರ್ ಒಳಗೆ ಬೆಂಕಿ ಹೊತ್ತುಕೊಂಡರೂ ಅದರಿಂದ ಸ್ಫೋಟ ಸಂಭವಿಸುವ ಸಾಧ್ಯತೆಗಳಿರುತ್ತವೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಲು ಇದು ಸಹಾಯ ಮಾಡುತ್ತದೆ. ಬೆಂಕಿ ಹೊತ್ತುಕೊಂಡಾಗ ಆಕ್ಸಿಜನ್ ಸಿಲಿಂಡರ್ ಗಳು ಬಾಂಬ್ ರೀತಿ ಸ್ಫೋಟಗೊಳ್ಳುತ್ತವೆ ಎಂದು ಹೇಳಿದ್ದಾರೆ.
ರೋಗಲಕ್ಷಣವಿಲ್ಲದ ಮತ್ತು ಸ್ವಲ್ಪ ರೋಗಲಕ್ಷಣಗಳಿರುವ ಕೋವಿಡ್ -19 ಸೋಂಕಿತರಿಗೆ ಮನೆಗಳಲ್ಲಿಯೇ ಐಸೋಲೇಷನ್ ನಲ್ಲಿರಲು ರಾಜ್ಯ ಸರ್ಕಾರ ತಿಳಿಸಿದೆ. ಹೀಗಾಗಿ ಸಾಕಷ್ಟು ಜನರು ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿ ಮಾಡಿದ್ದಾರೆ. ಕೆಲವರು ಸಿಲಿಂಡರ್ ಗಳನ್ನು ಬಾಡಿಗೆಗಳಿಗೆ ಪಡೆದುಕೊಂಡಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ 150-200 ಆಕ್ಸಿಜನ್ ಸಿಲಿಂಡರ್ ಬ್ಯಾಂಕುಗಳ ಘಟಕಗಳಿದ್ದು, ಪ್ರತೀನಿತ್ಯ ಈ ಘಟಕಗಳಿಂದ 60-70 ಸಿಲಿಂಡರ್ ಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಆಮ್ಲಜನಕ ಸಿಲಿಂಡರ್‌ಗಳ ಸುರಕ್ಷತೆಗಳ ಬಗ್ಗೆ ಜನರಿಗೆ ತಿಳಿದಿಲ್ಲ. ಸಿಲಿಂಡರ್ ಪಕ್ಕದಲ್ಲಿ ದೀಪ ಬೆಳಗಿಸುವುದೂ ಕೂಡ ಸ್ಫೋಟಕ್ಕೆ ಕಾರಣವಾಗಬಹುದು. ಜನರು ಹೆಚ್ಚು ಜಾಗರೂಕರಾಗಿರಬೇಕಿದೆ ಎಂದು ಆಕ್ಸಿಜನ್ ಸಿಲಿಂಡರ್ ಸರಬರಾಜುದಾರ ರಾಜೇಂದ್ರ ಶರ್ಮಾ ಹೇಳಿದ್ದಾರೆ.
ಆಕ್ಸಿಜನ್ ಸಿಲಿಂಡರ್‌ನ ಮೂರು ಮೀಟರ್‌ಗಳ ಒಳಗೆ ಸಣ್ಣ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡರೂ ಅಥವಾ ಮೇಣದ ಬತ್ತಿ ಅಥವಾ ಗ್ಯಾಸ್ ಸ್ಟೌವ್‌ನಂತಹ ತಾಪ ಕೂಡ ಅಪಾಯವನ್ನು ಸೃಷ್ಟಿಸಬಹುದು ಎಂದು ತಿಳಿಸಿದ್ದಾರೆ.
ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆರೋಗ್ಯ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ.
ಹಸಿರು ಪಟಾಕಿಗಳನ್ನು ಸಿಡಿಸಲು ಸರ್ಕಾರ ಅನುಮತಿ ನೀಡುತ್ತಿರುವುದರಿಂದ ಜನರೇ ಜವಾಬ್ದಾರಿಯನ್ನು ತೆಗೆದುಕೊಳ್ಲಬೇಕಿದೆ. ಪಟಾಕಿ ಹೊಡೆಯುವುದನ್ನು ಸಾಕಷ್ಟು ನಿಯಂತ್ರಿಸಬೇಕಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಪ್ರಮುಖವಾಗಿ ಬೆಂಗಳೂರಿನಲ್ಲಿ ಬಹಳ ಹತ್ತಿರಗಳಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇಂತಹ ಸಂದರ್ಭದಲ್ಲಿ ವಿಪತ್ತುಗಳು ದೊಡ್ಡಮಟ್ಟದಲ್ಲೇ ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಹಿರಿಯ ವೈದ್ಯ ಡಾ.ಗೋಪಿಕೃಷ್ಣಾ ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


