ಮಕ್ಕಳ ಹಿತಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯೇ ಹೊರತು, ಪ್ರತಿಷ್ಠೆಗಾಗಿ ಅಲ್ಲ: ಸುರೇಶ್ ಕುಮಾರ್
ನಮ್ಮ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು ಅದು ಯಾರೊಬ್ಬರ ಪ್ರತಿಷ್ಠೆಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ನಮ್ಮ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು ಅದು ಯಾರೊಬ್ಬರ ಪ್ರತಿಷ್ಠೆಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಸಂಸ್ಥೆ ಆಕಾಶವಾಣಿ ಜೊತೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮಕ್ಕಳ ಮುಂದಿನ ವ್ಯಾಸಂಗಕ್ಕೆ ಎಸ್ಸೆಸ್ಸೆಲ್ಸಿ ತರಗತಿ ಪ್ರಮುಖ ತಿರುವಾಗಿರುವುದು ಮತ್ತು ಪ್ರಮುಖ ಮಾನದಂಡವಾಗಿರುವುದರಿಂದ 10ನೇ ತರಗತಿ ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ಪರೀಕ್ಷೆಗಳನ್ನು ನಡೆಯಬೇಕೆಂಬುದು ರಾಜ್ಯದ ಬಹುಪಾಲು ವಿದ್ಯಾರ್ಥಿಗಳ ಅಭಿಪ್ರಾಯವಾಗಿದ್ದು, ಈ ಕುರಿತಂತೆ ಶಿಕ್ಷಣ ಇಲಾಖೆಯ ಪ್ರಮುಖ ಪಾಲುದಾರರದ ನಮ್ಮ ವಿದ್ಯಾರ್ಥಿಗಳು, ಪೋಷಕರೊಂದಿಗೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ಶಿಕ್ಷಣ ತಜ್ಞರು, ಸಾಹಿತಿಗಳು, ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಸದಸ್ಯರು ಸೇರಿದಂತೆ ಸಮಾಜದ ವಿವಿಧ ಸ್ತರದ ಪ್ರಮುಖರ ಅಭಿಪ್ರಾಯವೂ ಸಹ ಈ ಪರೀಕ್ಷೆಯನ್ನು ನಡೆಸಬೇಕೆಂಬುದಾಗಿದೆ ಎಂದು ತಿಳಿಸಿದರು.
ಜೂನ್ 25ರಿಂದ ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಕೋವಿಡ್ ಹಿನ್ನೆಲೆಯ ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.
ಮಕ್ಕಳ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಒಂದಂಶದ ಕಾರ್ಯಕ್ರಮವಾಗಿದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ನಿರ್ವಹಣೆಯಲ್ಲಿ ಬದಲಾವಣೆ ಹಾಗೂ ಸುಧಾರಣೆಗಳನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಆರೋಗ್ಯ ತಪಾಸಣೆ, ಮಾಸ್ಕ್ ಪೂರೈಕೆ, ಪರೀಕ್ಷಾ ಕೇಂದ್ರದ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಇಲ್ಲ: ಯಾವುದೇ ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್ಮೆಂಟ್ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೇ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.
ಶಾಲೆಗಳ ಆರಂಭಕ್ಕೆ ದಿನಾಂಕ ನಿಗದಿ: ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭದ ದಿನಾಂಕವನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲಾಗುವುದು. ತರಗತಿಗಳನ್ನು ಈಗಲೇ ಪ್ರಾರಂಭಿಸಬಾರದೆಂದು ಪೋಷಕರ ಒತ್ತಡವಿದ್ದು, ಎಲ್ಲಾ ಆಯಾಮಗಳಲ್ಲಿ ಇದನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


