'ಕೊರೋನಾ' ಸೋಂಕು: ಸಾಮಾನ್ಯರಿಗಿಂತ ವಿಐಪಿಗಳಿಗೇ ಹೆಚ್ಚು ಆತಂಕ!, ಸಿಎಂ,ಸಚಿವರುಗಳಿಗೇನಿದೆ ರಕ್ಷಣೆ?
ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗೆ ಶಾಲಾ ಕಾಲೇಜುಗಳು, ಮಾಲ್ ಗಳು, ಸಿನೆಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಿ ಮುಖ್ಯಮಂತ್ರಿ ಆದೇಶ ಹೊರಡಿಸಿರಬಹುದು. ಆದರೆ ಸ್ವತಃ ಸಿಎಂ ಮತ್ತು ಅವರ ಸಂಪುಟ ಸಚಿವರುಗಳು ಅಪಾಯಕಾರಿ ಸನ್ನಿವೇಶದಲ್ಲಿರುತ್ತಾರೆ.

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗೆ ಶಾಲಾ ಕಾಲೇಜುಗಳು, ಮಾಲ್ ಗಳು, ಸಿನೆಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಿ ಮುಖ್ಯಮಂತ್ರಿಯವರೇನೋ ಆದೇಶ ಹೊರಡಿಸಿರಬಹುದು. ಆದರೆ ಸ್ವತಃ ಸಿಎಂ ಮತ್ತು ಅವರ ಸಂಪುಟ ಸಚಿವರುಗಳಿಗೇ ಅಪಾಯಕಾರಿ ಸನ್ನಿವೇಶಗಳು ಹೆಚ್ಚು.
ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಪ್ರತಿನಿತ್ಯ ನೂರಾರು, ಸಾವಿರಾರು ವ್ಯಕ್ತಿಗಳನ್ನು ಭೇಟಿ ಮಾಡುತ್ತಿರುತ್ತಾರೆ, ಜನರೊಂದಿಗೆ ಬೆರೆಯುತ್ತಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ, ಹಲವು ಊರುಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ಇವರಿಗೆ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈಗಾಗಲೇ ವಿದೇಶಗಳಲ್ಲಿ ಅತಿಗಣ್ಯ ವ್ಯಕ್ತಿಗಳಿಗೆ ಕೊರೋನಾ ಸೋಂಕು ತಗುಲಿದ್ದನ್ನು ನಾವು ನೋಡಿದ್ದೇವೆ.
ಸಿಎಂ ಮತ್ತು ಇತರ ಸಚಿವರುಗಳು ಪ್ರತಿನಿತ್ಯ ಕಡಿಮೆಯೆಂದರೂ ಎರಡರಿಂದ ಮೂರು ಸಾರ್ವಜನಿಕ ಸಮಾರಂಭಗಳು, ಅರ್ಧ ಡಜನ್ನಷ್ಟು ಮದುವೆ ಸಮಾರಂಭಗಳು, ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ. ಬೇಡವೆಂದರೂ, ಇಷ್ಟವಿಲ್ಲದಿದ್ದರೂ ಕಾರ್ಯಕ್ರಮಗಳಿಗೆ ಹೋದಲ್ಲಿ ಜನರನ್ನು ತಬ್ಬಿಕೊಳ್ಳಬೇಕಾಗುತ್ತದೆ, ಕೈ ಕುಲುಕಬೇಕಾಗುತ್ತದೆ, ಸಾರ್ವಜನಿಕರೊಂದಿಗೆ ಬೆರೆಯಬೇಕಾಗುತ್ತದೆ, ಹೀಗಿರುವಾಗ ಗಣ್ಯ ವ್ಯಕ್ತಿಗಳಿಗೆ ಕೊರೋನಾ ವೈರಸ್ ಬರುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು.
ಈ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರದ ಅಧಿಕಾರಿಗಳು ಏನು ಮಾಡಿದ್ದಾರೆ?: ಸಿಎಂ ಮತ್ತು ಇತರ ಸಚಿವರಿಗೆ ಅವರು ಎದುರಿಸಬೇಕಾದ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಅವರ ಕುಟುಂಬ ಸದಸ್ಯರುಗಳಿಗೆ ಸಹ ವಿವರಿಸಲಾಗಿದೆ. ಆದರೂ ಸಾರ್ವಜನಿಕ ಜೀವನದಲ್ಲಿರುವಾಗ ಜನರ ಸಂಪರ್ಕ ತಡೆಯುವುದು ಕಷ್ಟ.
ಉದಾಹರಣೆಗೆ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಸಿಎಂ ಯಡಿಯೂರಪ್ಪ ನಿವಾಸವಿದೆ. ಇಲ್ಲಿಗೆ ಪ್ರತಿನಿತ್ಯ ನೂರಾರು ಜನರು ಬರುತ್ತಾರೆ. ಪ್ರತಿನಿತ್ಯ 50ರಿಂದ 100 ಜನರಿಗೆ ಊಟ ಹಾಕಲಾಗುತ್ತದೆ. 300ರಿಂದ 400 ಜನರಿಗೆ ಪಾನೀಯ, ಕಾಫಿ, ಟೀ ಒದಗಿಸಲಾಗುತ್ತದೆ. ಸಿಎಂ ಅವರ ನಿವಾಸದಲ್ಲಿ ದಿನಪೂರ್ತಿ ಮೂರು ಶಿಫ್ಟ್ ಗಳಲ್ಲಿ ಅಡುಗೆ ಮನೆಯಲ್ಲಿ ಕೆಲಸದವರು ಊಟ, ತಿಂಡಿ, ತಿನಿಸು, ಕಾಫಿ,ಟೀ ಎಂದು ಮಾಡುತ್ತಿರುತ್ತಾರೆ.
ಸಚಿವರುಗಳ ಮನೆ ಮತ್ತು ಕಚೇರಿಗಳಲ್ಲಿ ಕೂಡ ಇದೇ ಪರಿಸ್ಥಿತಿ. ಸಿಎಂ ಮನೆ ಮತ್ತು ಕಚೇರಿಗಿಂತ ಸ್ವಲ್ಪ ಕಡಿಮೆ ಮಟ್ಟದಲ್ಲಿರಬಹುದಷ್ಟೆ. ಸೋಂಕು ತಗಲದಂತೆ ಮುಖ್ಯಮಂತ್ರಿ, ಸಚಿವರುಗಳ ಮನೆ, ಕಚೇರಿಗಳಲ್ಲಿ ಅಲ್ಲಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ವಿಐಪಿಗಳನ್ನು ಭೇಟಿ ಮಾಡುವ ಮೊದಲು ಈ ಸ್ಯಾನಿಟೈಸರ್ ಬಳಸಬೇಕೆಂದು ಕಡ್ಡಾಯ ಸೂಚನೆ ನೀಡಲಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತದೆ, ಸಿಎಂ ಮತ್ತು ಸಚಿವರುಗಳು ಎಷ್ಟು ಸುರಕ್ಷಿತ ಎಂಬುದು ಪ್ರಶ್ನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


