ಕೋವಿಡ್-19: ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ರಿಂದ ತೊಂದರೆಗೊಳಗಾದ ಸಂಗೀತಗಾರರಿಗೆ ನೆರವು
ಕೋವಿಡ್-19, ಲಾಕ್ ಡೌನ್ ಪರಿಣಾಮದಿಂದಾಗಿ ಜೀವಹಾನಿಯಷ್ಟೇ ಅಲ್ಲದೇ ಜೀವನವೂ ದುಸ್ತರವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ಆರ್ಥಿಕ ನೆರವನ್ನು ನೀಡಿದ್ದಾರೆ.

ಬೆಂಗಳೂರು: ಕೋವಿಡ್-19, ಲಾಕ್ ಡೌನ್ ಪರಿಣಾಮದಿಂದಾಗಿ ಜೀವಹಾನಿಯಷ್ಟೇ ಅಲ್ಲದೇ ಜೀವನವೂ ದುಸ್ತರವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ಆರ್ಥಿಕ ನೆರವನ್ನು ನೀಡಿದ್ದಾರೆ.
ಎಲ್ಲಾ ಉದ್ಯೋಗಗಳು ಬಾಧಿತವಾಗಿರುವಂತೆ, ಸಂಗೀತ, ನೃತ್ಯ ಮತ್ತು ಇತರ ಕಲಾಪ್ರಕಾರಗಳಲ್ಲಿ ಕೆಲಸ ಮಾಡುವವರೂ ತೊಂದರೆಗೆ ಒಳಗಾಗಿದ್ದು ಕಳೆದ 3 ತಿಂಗಳಿನಿಂದ ಯಾವುದೇ ಕಾರ್ಯಕ್ರಮ-ಸಂಭಾವನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ಅವರು ತಮ್ಮ ಸ್ವರ-ಲಯ ಸಂಗೀತ ಶಾಲೆಯ ವತಿಯಿಂದ ಆನೂರು ಅನಂತಕೃಷ್ಣ ಶರ್ಮ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ, ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಸುಗಮ ಸಂಗೀತ ಕಲಾವಿದರು, ಕರ್ನಾಟಕ ಸಂಗೀತ ಕಲಾವಿದರು, ತಾಳವಾದ್ಯ ಕಲಾವಿದರು ಮತ್ತು ನೃತ್ಯ ಕಲಾವಿದರಿಗೆ ಆರ್ಥಿಕ ನೆರವು ನೀಡುವ ಮೂಲಕ ಕಲಾವಿದರಲ್ಲಿ ಧೈರ್ಯ ತುಂಬಿದ್ದಾರೆ.
“ಇಂತಹ ಪರಿಸ್ಥಿತಿ ನಿಕಟ ಪೂರ್ವದಲ್ಲಿ ನೋಡಿರಲಿಲ್ಲ. ಸಂಗೀತ - ನೃತ್ಯ ಕಲಾವಿದರು, ರಂಗ ಕಲಾವಿದರು, ತಂತ್ರಜ್ಞರು, ಇತರ ಕಲಾವಿದರಿಗೆ ಮತ್ತು ಅವರ ಕುಟುಂಬದವರಿಗೆ ಕಾರ್ಯಕ್ರಮ ಸಂಭಾವನೆಯೇ ಜೀವನಾಧಾರವಾಗಿರುತ್ತದೆ. ಜೀವನ ನಿರ್ವಹಣೆ ದುರ್ಭರವಾಗಿರುವ ಇಂತಹ ಸಂದರ್ಭದಲ್ಲಿ, ಕಷ್ಟದಲ್ಲಿರುವ ಮತ್ತು ಉದಯೋನ್ಮುಖ ಕಲಾವಿದರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಯುವ ಕಲಾವಿದರಿಗೆ ನೆರವು ನೀಡಬೇಕೆಂದು ನನ್ನ ಇತರ ಕಲಾ ಸಹೋದ್ಯೋಗಿಗಳಲ್ಲಿ ಮನವಿ ಮಾಡುತ್ತಿದ್ದೇನೆ” ಎಂದು ಗಿರಿಜಾ ನಾರಾಯಣ್ ಹೇಳಿದರು.
“ಕಲಾವಿದರ ಗಳಿಕೆಯ ದೊಡ್ಡ ಪಾಲು ವಾಧ್ಯ, ವೇಷ-ಭೂಷಣ ಮತ್ತು ಇತರ ಪರಿಕರಗಳ ಖರೀದಿಗೆ ವೆಚ್ಚವಾಗಿ ಅವರ ಬಳಿ ಹೆಚ್ಚಿನ ಹಣ ಉಳಿದಿರುವುದಿಲ್ಲ. ಅದರಲ್ಲೂ, ವೃತ್ತಿ ಜೀವನದ ಆರಂಭದಲ್ಲಿ ದೀರ್ಘಾವಧಿ ಆರ್ಥಿಕ ಯೋಜನೆ ಮಾಡದೇ ಅಂದಂದಿನ ಖರ್ಚುಗಳಿಗೆ ಹಣ ವಿನಿಯೋಗಿಸಿ ತಮ್ಮ ಜೀವನವನ್ನು ಇದಕ್ಕಾಗಿ ಮೀಸಲಿಟ್ಟಿರುತ್ತಾರೆ. ಹೀಗಾಗಿ ಈ ಕೊವಿಡ್-19ರ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ನಂತರವೂ ಅವರ ಜೀವನ ಬಂಡಿಯನ್ನು ಹಳಿಗೆ ತರಲು ಹಿರಿಯ ಕಲಾವಿದರ ಸಹಾಯ ಹಸ್ತದ ಅವಶ್ಯಕತೆ ಅವರಿಗಿರುತ್ತದೆ” ಎಂದು ಆನೂರು ಅನಂತಕೃಷ್ಣ ಶರ್ಮ ಸಂಗೀತ ಪ್ರತಿಷ್ಠಾನದ ಆನೂರು ಅನಂತಕೃಷ್ಣ ಶರ್ಮ ಹೇಳಿದರು.
ಇದೇ ಸಂದರ್ಭದಲ್ಲಿ ಸ್ವರ-ಲಯ ಸಂಗೀತ ಶಾಲೆಯು, ಬೆಂಗಳೂರಿನ ಡಾ: ಆರ್ ವಿ ರಾಘವೇಂದ್ರ ಅವರ ನೇತೃತ್ವದಲ್ಲಿ ಸಂಗೀತ ಕಲಾವಿದರಿಗೆ ನೆರವು ನೀಡುತ್ತಾ ಬಂದಿರುವ 'ಅನನ್ಯ ಆರೋಗ್ಯ ಧಾರಾ' ಸಂಸ್ಥಗೂ ದೇಣಿಗೆ ನೀಡಲಾಗಿದೆ. ಸ್ವರ ಲಯ ಸಂಗೀತ ಶಾಲೆಯು ಈ ಸಂದರ್ಭ ಮಾತ್ರವಲ್ಲದೇ, ಈ ಹಿಂದೆ ಇಲ್ಲಿಯವರೆಗೂ ಸಂಗೀತ ಮತ್ತು ಇತರ ಕಲಾ ಪ್ರಕಾರದಲ್ಲಿ ಗಂಭೀರವಾಗಿ ಅಧ್ಯಯನ ನಡೆಸುತ್ತಿರುವ 100ಕ್ಕಿಂತ ಹೆಚ್ಚು ಅರ್ಹ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


