3 ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್: ಸಚಿವ ಶ್ರೀರಾಮುಲು ಕಚೇರಿ ಸೀಲ್ಡೌನ್
ಕಚೇರಿಯ ಮೂವರು ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಕಚೇರಿ ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕಚೇರಿಯ ಮೂವರು ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಕಚೇರಿ ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶ್ರೀರಾಮುಲು ಅವರ ಚಾಲಕ ಹಾಗೂ ಕಚೇರಿಯ ಇಬ್ಬರು ಸಹಾಯಕರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿಂದೆ ಮತ್ತಿಬ್ಬರು ಸಿಬ್ಬಂದಿಗಳಾದ ನಿತಶ್ ಹಾಗೂ ಸೂಜಿತ್ ಅವರಲ್ಲಿ ವೈರಸ್ ದೃಢಪಟ್ಟಿತ್ತು. ಕಳೆದ ಕೆಲ ದಿನಗಳಿಂದ ಇಬ್ಬರೂ ಕಚೇರಿಯಲ್ಲೆಲ್ಲೂ ಕಾಣಿಸಿಕೊಂಡಿರಲಿಲ್ಲ. ನಿತೇಷ್ ಎಂಬುವವರಲ್ಲಿ ಕೊರೋನಾ ಲಕ್ಷಣಗಳು ಕಂಡ ಬಂದ ಕೂಡಲೇ ಶಿವಮೊಗ್ಗದ ಅಯನೂರಿಗೆ ತೆರಳಿದ್ದರು. ಬಳಿಕ ಸುಜಿತ್ ಅವರೂ ಕೂಡ ಕಚೇರಿಗೆ ಬಂದಿರಲಿಲ್ಲ. ಸುಜಿತ್ ಅವರಿಂದಲೇ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕಚೇರಿಯಲ್ಲಿ ಸೋಂಕು ಹರಡಿರುವ ಕುರಿತು ಪ್ರಶ್ನಿಸಿದಾಗ, ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸಿಬ್ಬಂದಿಯಲ್ಲಿ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಇದೀಗ ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ಶ್ರೀರಾಮುಲು ಅವರ ಕಚೇರಿಯ ಬಳಿಯೇ ಇರುವುದರಿಂದ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರ ಕಚೇರಿಯನ್ನು ಆರೋಗ್ಯಾಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆಂದು ತಿಳಿದುಬಂದಿದೆ.
13 ಮಂದಿ ಸಿಬ್ಬಂದಿಗಳಲ್ಲಿ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹವನ್ನು ಬಂದ್ ಮಾಡಲಾಗಿದ್ದು, ಹಲವು ಜನರಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೊಳಗಾಗುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ.
ಈ ನಡುವೆ ಚಾಲಕನಲ್ಲಿ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೊಳಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


