ರಾಜ್ಯ

ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಮೂಲಕ ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದಾರೆ.

ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಸ್ವಿಟ್ಜರ್ಲ್ಯಾಂಡ್ ನ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ 'ಕರ್ನಾಟಕ ಪೆವಿಲಿಯನ್' ಉದ್ಘಾಟಿಸಿದರು.
Published On :

ದಾವೊಸ್ (ಸಿಟ್ಸರ್ಲೆಂಡ್):  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಮೂಲಕ ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದಾರೆ.

ದಾವೊಸ್ ನಲ್ಲೆ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸಾನ್ಮೆಝ್ ಅವರು ಮಮಾತನಾಡುತ್ತ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು.

ಕರ್ನಾಟಕ ಹೆಚ್ಚಿನ ಹೂಡಿಕೆ ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ ಅವರು ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು.

ನಂತರ ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಸುಲಲಿತ ವಹಿವಾಟು ನಡೆಸಲು ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಅಭಿವೃದ್ಧಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕ ವರ್ಲ್ಡ್ ಎಕನಾಮಿಕ್ ಫೋರಂ 2020ರ ಗುರಿ ಸಾಧನೆಗೆ ಸಕ್ರಿಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮಾಹಿತಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.