ಬಾದಾಮಿ: ಬನಶಂಕರಿ ದೇವಿ ಜಾತ್ರೆಗೆ ಹರಿದು ಬರುತ್ತಿದೆ ಜನಸಾಗರ
ನಾಡಿನ ಆರಾಧ್ಯ ದೇವತೆ ಬಾದಾಮಿಯ ಬನಶಂಕರಿ ದೇವಿಯ ಅದ್ಧೂರಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯ ಜನಸಾಗರವೇ ಹರಿದುಬರುತ್ತಿದೆ

ಬಾಗಲಕೋಟೆ: ನಾಡಿನ ಆರಾಧ್ಯ ದೇವತೆ ಬಾದಾಮಿಯ ಬನಶಂಕರಿ ದೇವಿಯ ಅದ್ಧೂರಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯ ಜನಸಾಗರವೇ ಹರಿದುಬರುತ್ತಿದೆ
ಬೆಳಗಾವಿ, ಗದಗ, ಕುಷ್ಟಗಿ, ಇಳಕಲ್, ತೇರದಾಳ, ಜಮಖಂಡಿ, ಹುಬ್ಬಳ್ಳಿ, ರಾಮದುರ್ಗ ಸೇರಿದಂತೆ ನಾಡಿನಾದ್ಯಂತ ಪಾದಯಾತ್ರಿಗಳು ಬರುತ್ತಿದ್ದಾರೆ. ಜತೆಗೆ ಚಕ್ಕಡಿ ಮತ್ತು ವಾಹನಗಳಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಮಾರ್ಗದುದ್ದಕ್ಕೂ ಪಾದಾಯಾತ್ರಿಗಳಿಗಾಗಿ ಚಹಾ, ತಿಂಡಿ, ಊಟ, ಔಷಧಿ ವ್ಯವಸ್ಥೆಯನ್ನು ಜನತೆ ಸ್ವಯಂ ಪ್ರೇರಿತವಾಗಿ ಮಾಡುತ್ತಿದ್ದಾರೆ. ಹಿಂದು-ಮುಸ್ಲಿಂ ಎನ್ನುವ ಭಾವನೆ ಇಲ್ಲದೆ ಎಲ್ಲರೂ ಪಾದಯಾತ್ರಿಗಳ ಸೇವೆಯಲ್ಲಿ ತೊಡಗಿದ್ದಾರೆ
ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜಾತ್ರೆಯಲ್ಲಿ ಭಾಗವಹಿಸಲು ನಿನ್ನೆಯೇ ಬಂದಿದ್ದಾರೆ.ಬನಶಂಕರಿ ಕ್ಷೇತ್ರದ ಸುತ್ತಲೂ ಭಕ್ತರು ಉಳಿದುಕೊಳ್ಳಲು ಟೆಂಟ್‌ಗಳನ್ನು ಹಾಕಿದ್ದು, ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಲು ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಭರ್ಜರಿ ವ್ಯವಸ್ಥೆ ಮಾಡಿದೆ.
ದೇವಸ್ಥಾನ ಎರಡು ಕಿಮೀ ಇರುವಾಗಲೇ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ವ್ಯವಸ್ಥೆ ಆಗಿದೆ. ಭಕ್ತರಿಗೆ ದೇವಿಯ ದರ್ಶನ ಪಡೆಯಲು ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಐನ್ನೂರು ಮೀಟರ್ ದೂರದಿಂದಲೇ ರಸ್ತೆ ಮಧ್ಯೆ ಪ್ರತ್ಯೇಕ ಕೌಂಟರ್ ಮಾಡಲಾಗಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರ್ವಜನಿಕರ ಒತ್ತಾಸೆಯ ಮೆರೆಗೆ ಅಲ್ಲಲ್ಲಿ ಕುಡಿವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಆಗಿದ್ದು, ಎಲ್ಲಕ್ಕೂ ಮಿಗಿಲಾಗಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಿದ್ದು ಕೂಡ ಶ್ಲಾಘನೆಗೆ ಪಾತ್ರವಾಗಿದೆ. ಈಗಾಗಲೇ ರಥೋತ್ಸವಕ್ಕೆ ಜನ ಸಾಗರ ಹರಿದು ಬಂದಿದ್ದು, ಮಧ್ಯಾಹ್ನದ ವೇಳೆ ಲಕ್ಷಾಂತರ ಜನ ಸೇರಲಿದ್ದಾರೆ.
ದೇವಿಯ ಜಾತ್ರೆಯ ಅಂಗವಾಗಿ ಇಂದು ಸಂಜೆ ನಡೆಯುವ ರಥೋತ್ಸವವವನ್ನು ಸಾಕ್ಷಿಕರಿಸಲಿದ್ದಾರೆ. ಜಾತ್ರೆಯ ಬರುವ ಭಕ್ತರಿಗಾಗಿ ಮನರಂಜನೆ ನೀಡಲು ನಾಟಕ ಕಂಪನಿಗಳು ನಿನ್ನೆಯಿಂದ ನಾಟಕ ಪ್ರದರ್ಶನ ಆರಂಭಿಸಿವೆ. ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರೂ ಜಾತ್ರೆಯ ನಾಟಕಗಳಲ್ಲಿ ಅಭಿನಯಿಸಿ, ಜನತೆಯನ್ನು ರಂಜಿಸಲಿದ್ದಾರೆ.
ಇಂದು ಸಂಜೆ ರಥೋತ್ಸವದೊಂದಿಗೆ ಆರಂಭಗೊಳ್ಳಲಿರುವ ದೇವಿ ಜಾತ್ರಾ ಮಹೋತ್ಸವ ತಿಂಗಳು ಕಾಲ ನಡೆಯಲಿದೆ. ರಥೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಲ್ಲಿನ ಭಕ್ತರಷ್ಟೆ ಅಲ್ಲದೆ ನೆರೆಯ ಮಹಾರಾಷ್ಟ, ಆಂಧ್ರ ಪ್ರದೇಶ, ತೆಲಂಗಾಣ, ತಮೀಳುನಾಡು ರಾಜ್ಯಗಳಿಂದಲೂ ಆಗಮಿಸಿ ದೇವಿ ದರ್ಶನ ಪಡೆಯಲಿದ್ದಾರೆ
ಧಾರ್ಮಿಕ ಸಭೆ: ಬನಶಂಕರಿ ದೇವಿ ಜಾತ್ರೆ ನಿಮಿತ್ಯವಾಗಿ ಇಂದು ಬನಶಂಕರಿಯಲ್ಲಿನ ಹಂಪಿಹೇಮಕೂಟ ಗಾಯತ್ರಿ ಪೀಠದದಿಂದ ಆಯೋಜನೆಗೊಂಡಿರುವ ಧಾರ್ಮಿಕ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ನೇಕಾರಿಕೆ ಎನ್ನುವುದು ಒಂದು ಕಾಯಕವಾಗಿದೆ. ನೇಕಾರರು ಬಟ್ಟೆ ನೇಯುತ್ತಾರೆ. ನಾವು ಕುರಿ ಕಾಯ್ದುಕೊಂಡು ಕಂಬಳಿ ನೇಯುತ್ತೇವೆ. ನಾವೆಲ್ಲ ಒಳ ಪಂಗಡಗಳು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


