ದೇಶಭಕ್ತಿಯ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ: ಎಚ್.ಡಿ.ಕುಮಾರಸ್ವಾಮಿ
ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿರುವುದು ಖಂಡನೀಯ. ಆ ರೀತಿಯ ವರ್ಗಕ್ಕೆ ಸೇರಿದವರ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ: ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿರುವುದು ಖಂಡನೀಯ. ಆ ರೀತಿಯ ವರ್ಗಕ್ಕೆ ಸೇರಿದವರ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇವತ್ತು ದೇಶ ಮುಖ್ಯ. ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಳೋ ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ ಗೊತ್ತಿಲ್ಲ. ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ನಮ್ಮ ಪಕ್ಷದ ಕಾರ್ಯಕರ್ತ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಘೋಷಣೆ ಕೂಗಿದ ಕೂಡಲೇ ಆಕೆಯ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟಕರಿಂದ ಆ ರೀತಿಯ ಉದ್ದೇಶಪೂರ್ವಕವಾಗಿ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಸಿಎಎ ವಿರೋಧಿ ಪ್ರತಿಭಟನೆ ಉದ್ದೇಶ ಏನೆಂಬುದು ಹೊರ ಬರುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಈ ರೀತಿಯ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದ್ದಾರೆ. ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ. ಹೋರಾಟಗಾರರು ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿದ್ದಾರೆಯೇ ಹೊರತು ಪಾಕಿಸ್ತಾನದ ಧ್ವಜವನ್ನಲ್ಲ ಎಂದು ತಿರುಗೇಟು ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಹಾರಿದ್ದ ರಾಷ್ಟ್ರಧ್ವಜಕ್ಕಿಂತ ಹತ್ತು ಪಟ್ಟು ಧ್ವಜಗಳು ಇಂದು ಹೋರಾಟದ ಹೆಸರಿನಲ್ಲಿ ಹಾರುತ್ತಿವೆ. ಸಂವಿಧಾನ ಕೊಟ್ಟ ಹಕ್ಕನ್ನು, ಸಂವಿಧಾನದ ಆಶಯಗಳು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲು ಆಗದು. ಯಾರೋ ಒಬ್ಬರು ಕಿಡಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಅಮೂಲ್ಯ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಆಕೆಗೆ ಅದನ್ನು ಹೇಳಲು ಅವಕಾಶ ಕೊಡಬೇಕಿತ್ತು. ಆಕೆಯ ಭಾಷಣಗಳನ್ನು ಈ ಹಿಂದೆಯೂ ಕೇಳಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯನ್ನು ನೋಡಿದ್ದೆ. ನಿನ್ನೆ ಮಾಡಿದ ಭಾಷಣದ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿವೆ. ಹಾಗಾಗಿ ಇದರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


