ಮಹದಾಯಿ ನೀರು ಹಂಚಿಕೆ: ಗೆಜೆಟ್ ಅಧಿಸೂಚನೆ ನಂತರ ಕಾಮಗಾರಿ ಆರಂಭ: ರಮೇಶ್ ಜಾರಕಿಹೊಳಿ
ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರು: ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಹದಾಯಿ ಯೋಜನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲೇಬೇಕೆಂದು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಹಲವು ಬಾರಿ ಮನವಿ ಮಾಡಿತ್ತು. ಗೆಜೆಟ್ ಹೊರಡಿಸಿದ ನಂತರ ೨.೧೮ ಟಿ.ಎಂ.ಸಿ. ಬಂಡೂರ ತಿರುವು ನಾಲೆ ಮತ್ತು ೧.೭೨ ಟಿ.ಎಂ.ಸಿ. ಕಳಸಾ ತಿರುವು ನಾಲೆಯಿಂದ ರಾಜ್ಯಕ್ಕೆ ಒಟ್ಟು ೩.೯೦ ಟಿ.ಎಂ.ಸಿ ನೀರು ಮಲಪ್ರಭಾ ನದಿಗೆ ಹರಿಸಲು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಕೊಳ್ಳುತ್ತೇವೆ ಎಂದಿದ್ದಾರೆ.
ಈ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ಪರಿಸರ ಇಲಾಖೆಯಿಂದ ವಿನಾಯಿತಿ ಪಡೆದಿದ್ದು ಕೇಂದ್ರ ಜಲ ಆಯೋಗ ಮತ್ತು ಅರಣ್ಯ ಇಲಾಖೆಯ ಅನುಮೋದನೆ ಪಡೆಯಬೇಕಾಗಿದೆ. ಇದಲ್ಲದೇ ಮಹದಾಯಿ ಜಲಾನಯನ ಪ್ರದೇಶದ ಕೆರೆಕಟ್ಟೆಗಳನ್ನು ತುಂಬಲು ೧.೫೦ ಟಿ.ಎಂ.ಸಿ. ನೀರನ್ನು ಬಳಸುತ್ತೇವೆ. ವಿದ್ಯುತ್ ಉತ್ಪಾದನೆಗಾಗಿ ೮.೦೨ ಟಿ.ಎಂ.ಸಿ. ನೀರನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಗಮಕ್ಕೆ ನೀಡುತ್ತೇವೆ. ಜತೆಗೆ ಬಳಸಿದ ನೀರನ್ನು ಪುನಃ ನದಿಗೆ ಬಿಡುತ್ತೇವೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ರೈತರ ಕನಸು ನನಸಾಗುವ ಸಂದರ್ಭ ಈಗ ಕೂಡಿ ಬಂದಿದೆ. ನಮ್ಮ ಪಾಲಿನ ಒಟ್ಟು ೧೩.೪೨ ಟಿ.ಎಂ.ಸಿ. ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸುಪ್ರಿಂ ಕೋರ್ಟ್ ಅವಕಾಶ ಕಲ್ಪಿಸುತ್ತಿರುವುದು ಈ ಭಾಗದ ನೀರಾವರಿ ಯೋಜನೆಗಳನ್ನು ಕಾಲಾಮಿತಿಯಲ್ಲಿ ಅನುಷ್ಠನಗೊಳಿಸಲು ನೆರವಾಗುತ್ತದೆ. ದಾವೆಗಳ ಅಂತಿಮ ಇತ್ಯರ್ಥಕ್ಕಾಗಿ ವಿಚಾರಣೆಯ ದಿನಾಂಕವನ್ನು ಈ ವರ್ಷದ ಜುಲೈ ೧೫ ರಂದು ನಿಗದಿಪಡಿಸಲಾಗಿದೆ. ಅಂದು ನಾವು ಹೆಚ್ಚುವರಿ ದಾಖಲಾತಿಗಳನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗುವ ನೀರನ್ನು ಪಡೆದುಕೊಳ್ಳುತ್ತೇವೆ ಎಂದು ಸಚಿವ ರಮೇಶ್ ಜಾರಕಿ ಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


