ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೋದರನಿಗೆ ನಕಲಿ ವಾಸಪತ್ರ ನೀಡಿದ ಆರೋಪ: ಮೊಡಗ ಗ್ರಾಮ ಪಂ.ವಿರುದ್ಧ ತನಿಖೆಗೆ ಆದೇಶ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೋದರ ಚೆನ್ನರಾಜ್ ಹಟ್ಟಿಹೊಳಿ ಅವರಿಗೆ ನಕಲಿ ವಾಸಪತ್ರ ನೀಡಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೋದರ ಚೆನ್ನರಾಜ್ ಹಟ್ಟಿಹೊಳಿ ಅವರಿಗೆ ನಕಲಿ ವಾಸಪತ್ರ ನೀಡಿರುವ ಆರೋಪ ಕೇಳಿಬಂದಿದೆ.
ಇವರು ಬೆಳಗಾವಿ ಜಿಲ್ಲೆಯ ಮೊಡಗ ಗ್ರಾಮ ಪಂಚಾಯತ್ ನ ಮೊಡಗ ಗ್ರಾಮದವರು ಎಂದು ಸರ್ಟಿಫಿಕೇಟ್ ನೀಡಿದ್ದು ವಾಸ್ತವವಾಗಿ ಅವರು ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿ ಗ್ರಾಮದವರಾಗಿದ್ದಾರೆ.
ಈ ನಿಟ್ಟಿನಲ್ಲಿ ಮೊಡಗ ಗ್ರಾಮ ಪಂಚಾಯತ್ ಸದಸ್ಯ ಬಾಬು ಕಳೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಕೆ ವಿ, ಮೊಡಗ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಆದೇಶ ಹೊರಡಿಸಿದ್ದಾರೆ.
ನಿಯಮ ಪ್ರಕಾರ, ಗ್ರಾಮ ಪಂಚಾಯತ್ ಪಿಡಿಒ ಅಥವಾ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮದಲ್ಲಿರುವ ನಿವಾಸಿಗಳಿಗೆ ವಾಸ ಪ್ರಮಾಣಪತ್ರ ನೀಡುವುದಾಗಿರುತ್ತದೆ. ಹಟ್ಟಿಹೊಳಿಯವರಿಗೆ ಮೊಡಗ ಗ್ರಾಮ ಪಂಚಾಯತ್ ನಿವಾಸಿ ಎಂದು ಪ್ರಮಾಣಪತ್ರ ನೀಡಲಾಗಿದೆ ಎಂದು ದೂರು ಬಂದಾಗ ಪರಿಶೀಲನೆ ನಡೆಸಿದಾಗ ಅಲ್ಲಿ ಅಕ್ರಮ ನಡೆದಿರುವುದು ಗೊತ್ತಾಯಿತು ಎನ್ನುತ್ತಾರೆ ರಾಜೇಂದ್ರ.
ಗ್ರಾಮ ಪಂಚಾಯತ್ ಸದಸ್ಯ ಇದನ್ನು ಮಾಡಿಸಿಕೊಟ್ಟಿದ್ದಾರೆ ಎಂದು ಪರಿಶೀಲನೆ ವೇಳೆ ತಿಳಿದಿದೆ. ಈ ಬಗ್ಗೆ ತನಿಖೆ ಮಾಡುವಂತೆ ಪಿಡಿಒ ಅಧಿಕಾರಿಗೆ ಹೇಳಿದ್ದೇನೆ ಎಂದರು.
ಬಾಬು ಕಳೆಯವರ ಸಹಾಯದಿಂದ ಚೆನ್ನರಾಜ್ ಹಟ್ಟಿಹೊಳಿ ಮೊಡಗ ಗ್ರಾಮದ ಮನೆ ಸಂಖ್ಯೆ 442ರಲ್ಲಿ ವಾಸವಾಗಿದ್ದೇನೆಂದು ಬರೆಸಿಕೊಂಡಿದ್ದಾರೆ. ಅದೇ ವಾಸಪತ್ರ ತೋರಿಸಿ ಮೊಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ನಿಂತಿದ್ದರು. ಈ ಅಕ್ರಮ ಗಮನಕ್ಕೆ ಬರುತ್ತಿದ್ದಂತೆ ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒಗೆ ದೂರು ನೀಡಿದೆ. ನಕಲಿ ಪ್ರಮಾಣಪತ್ರ ನೀಡುವಲ್ಲಿ ಮೊಡಗ ಗ್ರಾಮ ಪಂಚಾಯತ್ ಎಲ್ಲಾ ನಿಯಮವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದೆ.
ಇದೀಗ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳು ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


