ಭ್ರಷ್ಟಾಚಾರಕ್ಕೆ ಪತ್ರಿಕೋದ್ಯವೂ ಹೊರತಾಗಿಲ್ಲ: ಸಂತೋಷ್ ಹೆಗಡೆ ಬೇಸರ
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸುವಲ್ಲಿ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸಬೇಕು.

ಬೆಂಗಳೂರು: ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸುವಲ್ಲಿ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸಬೇಕು. ಆದರೆ, ಇಂದು ಈ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ ಆಯೋಜಿಸಿದ್ದ, ಪರಿಣಾಮಕಾರಿ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮವು ಇಂದು ತನ್ನ ಶಿಷ್ಟಾಚಾರ ಕಳೆದುಕೊಳ್ಳುವತ್ತ ಸಾಗಿದೆ. ಭ್ರಷ್ಟಾಚಾರ, ಸಮಾಜದ ಲೋಪದೋಷಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆದರೆ, ಇಂದು ಈ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇನ್ನು, ಕಾಸಿಗಾಗಿ ಸುದ್ದಿ ಮತ್ತು ಮೆಚ್ಚುಗೆ, ಬಣ್ಣಿಸುವ ಸುದ್ದಿ ಪ್ರಸಾರ ನಿಲ್ಲಿಸಬೇಕಾಗಿದೆ ಎಂದು ಹೇಳಿದರು.
ರಾಜಕೀಯ ನಾಯಕರಿಗೆ ದೇಶದ ಅಭಿವೃದ್ಧಿ ಹಾಗೂ ಜನಹಿತಾಸಕ್ತಿ ಬಗ್ಗೆ ಕಾಳಜಿ ಇಲ್ಲದಾಗಿದೆ. ಪತ್ರಿಕೋದ್ಯಮದಿಂದ ಸತ್ಯಾಂಶವನ್ನು ದೇಶದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು. ರಾಷ್ಟ್ರದ ಬಹುತೇಕರಲ್ಲಿ ಅಧಿಕಾರದಿಂದ ಹಣ, ಹಣದಿಂದ ಅಧಿಕಾರ ಎಂಬ ಭ್ರಮೆ ಇದ್ದು, ಶ್ರೀಮಂತಿಕೆ, ಅಧಿಕಾರ ಪೂಜಿಸುವ ಈ ಸಮಾಜದಲ್ಲಿ ಸತ್ಯವಂತರಿಗೆ ಬೆಲೆ ಇಲ್ಲದಾಗಿದೆ. ಇದನ್ನೆಲ್ಲ ಲೇಖನಿ ಎಂಬ ಕತ್ತಿಯ ಮೂಲಕ ತಿದ್ದಿ, ತೀಡುವ ಕೆಲಸ ಆಗಬೇಕಿದೆ ಎಂದರು.
ಪೊಲೀಸ್ ಮತ್ತು ಮಾಧ್ಯಮ ಕುರಿತು ಮಾತನಾಡಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಮತ್ತು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಇಂದಿನ ವ್ಯವಸ್ಥೆ ಪೊಲೀಸರಿಂದ ಸ್ವಾತಂತ್ರ್ಯ ಕಸಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಅವಶ್ಯಕತೆ ಇದೆ. ಸಂಸತ್ತು ವಿಧಾನಸಭೆಯಲ್ಲಿ ಶೇ.50ರಷ್ಟು ಕ್ರಿಮಿನಲ್ ಹಿನ್ನೆಯಲ್ಲಿರುವವರು ಇದ್ದಾರೆ. ಇವರು ಅಧಿಕಾರದಲ್ಲಿರುವಾಗ ನ್ಯಾಯಾಂಗದ ಬಲವರ್ಧನೆ ಹೇಗೆ ಸಾಧ್ಯ. ಬದಲಾವಣೆ ತರಲು ಶ್ರೀರಾಮನೇ ಬಂದ ಎಂದುಕೊಂಡೆವು. ಆದರೆ 6 ವರ್ಷದಿಂದ ಯಾವ ಬದಲಾವಣೆಯೂ ಕಾಣಲಿಲ್ಲ. ಎಲ್ಲವೂ ಜಾಸ್ತಿಯೇ ಆಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಎನ್ ಇಎಸ್ ರಾಜ್ಯ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ್ ರೆಡ್ಡಿ, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಪರಿಣಿತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಜಯಸಿಂಹ, ಪತ್ರಕರ್ತ ಗೌರಿಶ್ ಅಕ್ಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


