ಜನವರಿಯಲ್ಲಿ ಹುಬ್ಬಳ್ಳಿಯಿಂದ ದೇಶದ ವಿವಿಧೆಡೆಗೆ ವಿಮಾನ ಸೇವೆ ಪುನರ್ ಆರಂಭ!
ಹೊಸ ವರ್ಷದಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ.

ಹುಬ್ಬಳ್ಳಿ: ಹೊಸ ವರ್ಷದಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ. ಇಂಡಿಗೊ, ಸ್ಟಾರ್ ಏರ್ ಮತ್ತು ಟ್ರೂ ಜೆಟ್ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ಇತರ ನಗರಗಳಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ನೆರವಾಗಲಿವೆ.
ಹುಬ್ಬಳ್ಳಿ - ಅಹಮದಾಬಾದ್ ನಡುವೆ ಜನವರಿ 4 ರಿಂದ ಇಂಡಿಗೊ ಏರ್ ಲೈನ್ಸ್ ವಿಮಾನ ಸೇವೆಯನ್ನು ಆರಂಭಿಸಲಿದೆ. ಹೆಚ್ಚಾಗಿ ವ್ಯಾಪಾರಿ ಪ್ರಯಾಣಿಕರೇ ಸಂಚರಿಸುವ ಈ ಮಾರ್ಗ ಪ್ರಸಿದ್ಧ ಮಾರ್ಗಗಳಲ್ಲಿ ಒಂದಾಗಿದೆ. ಲಾಕ್ ಡೌನ್ ಜಾರಿಯಾದ ನಂತರ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜನವರಿಯಿಂದ ಪುನರ್ ಆರಂಭವಾಗಲಿದೆ.
ಈ ಮಾರ್ಗದಲ್ಲಿ ವಿಮಾನ ಸೇವೆ ಪುನರ್ ಆರಂಭಕ್ಕೆ ತೀವ್ರವಾದ ಬೇಡಿಕೆ ಇತ್ತೆಂದು ಖಚಿತ ಮೂಲಗಳು ತಿಳಿಸಿವೆ. ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಈ ಮಾರ್ಗದಲ್ಲಿ ಇಂಡಿಯೋ ಏರ್ ಬಸ್ ಕಾರ್ಯಾರಂಭಿಸಲಿದೆ.
ಕೊಚ್ಚಿ- ಹುಬ್ಬಳ್ಳಿ, ಗೋವಾ: ಜನವರಿ ಎರಡನೇ ವಾರದಿಂದ ಕೇರಳ, ಗೋವಾ ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸುವ ವಿಮಾನ ಸೇವೆಯನ್ನು ಇಂಡಿಗೋ ಆರಂಭಿಸುತ್ತಿದೆ. ನವದೆಹಲಿಗೆ ನೂತನ ವಿಮಾನ ಆರಂಭಿಸುವ ಪ್ರಸ್ತಾವವಿದೆ. ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಸಕ್ತಿ ಹೊಂದಿದ್ದಾರೆ. ಸಂಬಂಧಿತ ಇಲಾಖೆಗಳ ಅನುಮತಿ ಪಡೆದ ಬಳಿಕ ಮಾರ್ಚ್ ನಲ್ಲಿ ಈ ಮಾರ್ಗದಲ್ಲಿ ಇಂಡಿಗೊ ವಿಮಾನ ಸೇವೆ ಆರಂಭಿಸುವ ಸಾಧ್ಯತೆಯಿದೆ.
ಹುಬ್ಬಳಿಗೆ ಆಗಮಿಸುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ವಿವಿಧ ನಗರಗಳಿಗೆ ವಿಮಾನ ಸೇವೆ ಆರಂಭಿಸುವುದಕ್ಕೆ ತೀವ್ರವಾದ ಬೇಡಿಕೆಯಿದೆ. ಜನವರಿಯಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳು ಸೇವೆಯನ್ನು ಆರಂಭಿಸಲಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಉಪ ಜನರಲ್ ಮ್ಯಾನೇಜರ್ ರೂಪೇಶ್ ಕುಮಾರ್ ಹೇಳಿದ್ದಾರೆ.
ಜನವರಿ ಎರಡನೇ ವಾರದಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಕಂಪನಿ ಚಿಂತನೆ ನಡೆಸಿದೆ. ಇದು ಇನ್ನೂ ದೃಢಪಟ್ಟಿಲ್ಲ. ಆದರೆ, ಜನವರಿ ಮಧ್ಯದಿಂದ ತಿರುಪತಿಗೆ ವಿಮಾನ ಸೇವೆ ಆರಂಭವಾಗಲಿದೆ ಎಂದು ವಿಮಾನಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಹುಬ್ಬಳಿ-ಬೆಂಗಳೂರು ಮತ್ತು ಹುಬ್ಬಳ್ಳಿ- ಹೈದ್ರಾಬಾದ್ ನಡುವೆ ವಿಮಾನಗಳ ಕಾರ್ಯಾಚರಣೆಗೆ ಟ್ರೂ ಜೆಟ್ ಕಂಪನಿ ಅನುಮತಿ ಪಡೆದುಕೊಂಡಿದೆ. ಇತ್ತೀಚಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಟ್ರೂ ಜೆಟ್ ಅಧಿಕಾರಿಗಳು ಜನವರಿ ಮಧ್ಯಭಾಗದಿಂದ ಎರಡು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲು ಆಸಕ್ತಿ ತೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


