ಎಸ್ಸಿ/ಎಸ್ ಟಿ ನೌಕರರ ಬಡ್ತಿ, ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಒತ್ತಾಯ: ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ
ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ನಿವಾರಣೆಗೆ ಹಿರಿಯ ಸಚಿವರ ನೇತೃತ್ವದಲ್ಲಿ ಶಾಶ್ವತ ಸಮಿತಿ ರಚಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ನಿವಾರಣೆಗೆ ಹಿರಿಯ ಸಚಿವರ ನೇತೃತ್ವದಲ್ಲಿ ಶಾಶ್ವತ ಸಮಿತಿ ರಚಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿ ಪತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಅನ್ಯಾಯಕ್ಕೆ ಒಳಗಾಗಿರುವ ನೌಕರರ ಹಿತ ಕಾಪಾಡುವಂತೆ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಬಡ್ತಿ ವಿಚಾರವು ಅನೇಕ ವರ್ಷಗಳಿಂದ ಬಿಡಿಸಲಾಗದ ಸಮಸ್ಯೆಯಾಗಿತ್ತು. ಹಿಂದೆ ಇದ್ದ ಕಾಯ್ದೆಗಳಲ್ಲಿನ ಕೆಲವು ನ್ಯೂನ್ಯತೆಗಳಿಂದಾಗಿ ನ್ಯಾಯಾಲಯಗಳೂ ಸಹ ಈ ಸಮಸ್ಯೆಯನ್ನು ಪರಿಹರಿಸಲು ದಶಕಗಟ್ಟಲೆ ಕಾಲಾವಧಿ ತೆಗೆದುಕೊಂಡಿದ್ದವು. ಕಡೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ಹಿಂಬಡ್ತಿ ಹೊಂದುವ ಭೀತಿಯಿಂದ ಸುಮಾರು 15ಕ್ಕೂ ಹೆಚ್ಚು ಜನ ಈ ವರ್ಗಗಳ ನೌಕರರು ಆತ್ಮಹತ್ಯೆ ಮಾಡಿಕೊಂಡರು ಮತ್ತು ಅನ್ಯಾಯದ ಸಾವಿಗೀಡಾದರು.
ಈ ವರ್ಗಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ 2017ರಲ್ಲಿ “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಡ್ತಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಗೆ ರಾಷ್ಟ್ರಪತಿಗಳೂ ಅಂಕಿತ ಹಾಕಿದರು. ಸರ್ವೋಚ್ಛ ನ್ಯಾಯಾಲಯವೂ ಈ ಕಾಯ್ದೆಯನ್ನು ಎತ್ತಿ ಹಿಡಿಯಿತು. ಇದರಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ನೌಕರರು ತುಸುಮಟ್ಟಿಗೆ ನಿರಾಳವಾದರು. ಆದರೆ ಪ್ರಸ್ತುತ ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ನೌಕರರ ಕುರಿತಾದ ನಿರ್ಲಕ್ಷ್ಯ ಧೋರಣೆಯಿಂದಾಗಿ ಮತ್ತು ಹಲವು ಇಲಾಖೆಗಳ ಅಧಿಕಾರಿಗಳ ಉದ್ಧಟತನದಿಂದಾಗಿ ಮತ್ತೆ ಅದೇ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ. ಮುಖ್ಯವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ಅಬಕಾರಿ, ಪೊಲೀಸ್, ಅರಣ್ಯ ಸಾರಿಗೆ, ನಗರಾಭಿವೃದ್ಧಿ, ಔಷಧ ನಿಯಂತ್ರಣ, ಕೆಪಿಟಿಸಿಎಲ್, ಅಗ್ನಿಶಾಮಕ, ಕೃಷಿ, ಶಿಕ್ಷಣ ಮುಂತಾದ ಇಲಾಖೆಗಳಲ್ಲಿ ಕಿರಿಯರಿಗೆ ಬಡ್ತಿ ನೀಡಿ ಹಿರಿಯರನ್ನು ಕಡೆಗಣಿಸಲಾಗಿದೆ.
ಉದಾಹರಣೆಗೆ ಜಲಸಂಪನ್ಮೂಲ ಇಲಾಖೆಯಲ್ಲಿ 2009ರಲ್ಲಿ ನೇಮಕವಾದವರನ್ನು ಬಿಟ್ಟು 2003ಮತ್ತು 2007 ರ ಬ್ಯಾಚ್‍ಗಳಲ್ಲಿ ನೇಮಕಗೊಂಡ ಎಂಜಿನಿಯರುಗಳಿಗೆ ಬಡ್ತಿ ನೀಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿವೆ. ನೇರ ನೇಮಕಾತಿ ಆದವರಿಗೆ ಮತ್ತು ಬ್ಯಾಕ್‍ಲಾಗ್ ಮೂಲಕ ನೇಮಕಾತಿ ಆದವರಿಗೂ ಹಲವು ಸಮಸ್ಯೆಗಳಿವೆ. ಪ.ಜಾತಿ, ಪ.ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಮೆರಿಟ್‍ನ ಕಾರಣಕ್ಕೆ ಸಾಮಾನ್ಯ ಕೋಟಾದಡಿ ಆಯ್ಕೆ ಆಗಿದ್ದರೆ ಅಂತವರಿಗೆ ಬಡ್ತಿ ನಿರಾಕರಿಸುವುದು ಅಸಂವಿಧಾನಿಕ ವರ್ತನೆಯಾಗುತ್ತದೆ. ಆದ್ದರಿಂದ, ಸ್ವತಃ ಮುಖ್ಯಮಂತ್ರಿಗಳೇ ಈ ಕುರಿತು ಗಮನ ಹರಿಸಬೇಕಾದ ಅಗತ್ಯವಿದೆ. ಈ ವರ್ಗಗಳ ನೌಕರರ ಸಮಸ್ಯೆಗಳ ನಿವಾರಣೆಗೋಸ್ಕರವೇ ಸರ್ಕಾರದ ಮಟ್ಟದಲ್ಲಿ ಹಿರಿಯ ಸಚಿವರ ಮುಂದಾಳತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ರಚಿಸಿ, ಕಾಲ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
ಪ್ರಸ್ತುತ ಉದ್ಭವವಾಗಿರುವ ಸಮಸ್ಯೆಗಳ ಕುರಿತು ಪ.ಜಾತಿ, ಪ.ಪಂಗಡಗಳ ನೌಕರರ ಸಂಘದ ಪದಾಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು ಸಹಾನುಭೂತಿಯಿಂದ ಪರಿಶೀಲಿಸಿ ಅನ್ಯಾಯಕ್ಕೊಳಗಾಗಿರುವ ನೌಕರರ ಹಿತರಕ್ಷಣೆಯನ್ನು ರಕ್ಷಿಸಬೇಕು ಮತ್ತು ಬಾಕಿ ಇರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


