ಮಾತು ಕೇಳದೆ 2 ತಿಂಗಳ ಮಗುವಿಗೆ ಹೊಡೆಯುತ್ತಿದ್ದ 6 ವರ್ಷದ ಬಾಲಕ: ಕೋಪಕ್ಕೆ ಮಗನನ್ನೇ ಕೊಂದ ತಾಯಿ!
2 ತಿಂಗಳ ಮಗುವಿಗೆ ಹೊಡೆಯುತ್ತಿದ್ದ 6 ವರ್ಷದ ಮಗನ ಮೇಲೆ ಕೋಪಗೊಂಡ ತಾಯಿಯೊಬ್ಬಳು ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರು: 2 ತಿಂಗಳ ಮಗುವಿಗೆ ಹೊಡೆಯುತ್ತಿದ್ದ 6 ವರ್ಷದ ಮಗನ ಮೇಲೆ ಕೋಪಗೊಂಡ ತಾಯಿಯೊಬ್ಬಳು ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಪಟ್ಟಣಗೆರೆ ನಿವಾಸಿ ತೇಜ್ ರಾಮ್ ಮತ್ತು ದೇವಿ ಅವರ ಪುತ್ರ ಮನೀಶ್ (6) ಮೃತ ಬಾಲಕ. ಈ ಸಂಬಂಧ ಪತಿ ಕೊಟ್ಟ ದೂರಿನ ಮೇರೆಗೆ ಮಗುವಿನ ತಾಯಿ ದೇವಿಯನ್ನು (26) ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿ ಮೂಲತಃ ರಾಜಸ್ಥಾನ ರಾಜ್ಯದವರಾಗಿದ್ದಾರೆ. ತೇಜರಾಮ್ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಪಟ್ಟಣಗೆರೆಯಲ್ಲಿ ಪ್ರಾವಿಷನ್ ಸ್ಟೋರ್ ಹೊಂದಿದ್ದಾರೆ. 7 ವರ್ಷಗಳ ಹಿಂದೆ ತೇಜ್ ರಾಮ್ ದೇವಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮನೀಶ್ ಹಾಗೂ ಎರಡು ತಿಂಗಳ ಮಗು ಇದೆ. ದಂಪತಿ ಪಟ್ಟಣಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ತೇಜ್ ರಾಮ್ ಎಂದಿನಂತೆ ಅಂಗಡಿಗೆ ಹೋಗಿದ್ದರು.
ಮಧ್ಯಾಹ್ನ 12.45ರ ಸುಮಾರಿಗೆ ಪತಿಗೆ ಕರೆ ಮಾಡಿದ್ದ ಪತ್ನಿ, ಪುತ್ರ ಮನೀಶ್ ಅಸ್ವಸ್ಥಗೊಂಡಿದ್ದು, ಕೂಡಲೇ ಮನೆಗೆ ಬರುವಂತೆ ಹೇಳಿದ್ದಳು. ತೇಜ್ ರಾಮ್ ಮನೆಗೆ ಹೋದಾಗ ಮನೀಶ್ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. ಪತ್ನಿಯನ್ನು ಪತಿ ಪ್ರಶ್ನೆ ಮಾಡಿದಾಗ ಮಗುವಿಗೆ ಮನೀಶ್ ಹೊಡೆಯುತ್ತಿದ್ದ. ಸುಮ್ಮನಿರುವಂತೆ ಎಷ್ಟು ಹೇಳಿದರೂ ಆತ ಸುಮ್ಮನಾಗಿರಲಿಲ್ಲ. ಕೋಪಗೊಂಡು ಆತನಿಗೆ ಹೊಡೆದಿದ್ದೆ. ದಿಂಬಿನಿಂದ ಮುಖ ಉಸಿರುಗಟ್ಟಿಸಿದ್ದೆ. ಬಳಿಕ ವೇಲಿನಿಂದ ಕತ್ತು ಹಿಸುಕಿದೆ ಎಂದು ಹೇಳಿದ್ದಾಳೆ.
ಕೂಡಲೇ ತೇಜ್ ರಾಮ್ ಸಂಬಂಧಿಯೊಬ್ಬರ ನೆರವಿನಿಂದ ಮಗನನ್ನು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವಿನ್ನು ಪರಿಶೀಲಿಸಿದ ವೈದ್ಯರು ಮೊದಲೇ ಮಗು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಪತಿ ತೇಜ್ ರಾಮ್ ಕೊಟ್ಟ ದೂರಿನ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಎಂ.ಪಾಟೀಲ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


