ಲೋಕಸೇವಾ ಆಯೋಗದಿಂದ 124 ಅಭ್ಯರ್ಥಿಗಳ ನೇಮಕಾತಿ ಆದೇಶ ಹೊರಡಿಸಿ: ಪ್ರಿಯಾಂಕ್ ಖರ್ಗೆ ಆಗ್ರಹ
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪಟ್ಟಿಯಲ್ಲಿನ 124 ಅಭ್ಯರ್ಥಿಗಳ ನೇಮಕಾತಿ ಆದೇಶ ನೀಡುವಂತೆ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪಟ್ಟಿಯಲ್ಲಿನ 124 ಅಭ್ಯರ್ಥಿಗಳ ನೇಮಕಾತಿ ಆದೇಶ ನೀಡುವಂತೆ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಳೆದ 2019ರ ನವೆಂಬರ್ 13ರಂದು ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ ಅಭ್ಯರ್ಥಿಗಳ ಆಯ್ಕೆಪಟ್ಟಿಯಲ್ಲಿ ಹೆಸರಿರುವ ವಿವಿಧ ಇಲಾಖೆಗಳ 661 ಅಭ್ಯರ್ಥಿಗಳ ಪೈಕಿ ನೇಮಕಾತಿ ಆದೇಶ ಕೊಡದ ಸರ್ಕಾರದ ಬೇರೆ ಬೇರೆ ಇಲಾಖೆಗಳ 124 ಅಭ್ಯರ್ಥಿಗಳಿಗೆ ಈ ಕೂಡಲೇ ನೇಮಕಾತಿ ಆದೇಶ ಕೊಡುವಂತೆ ಅವರು ಕೋರಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗ ಶೀಘ್ರ ಲಿಪಿಗಾರರು ಹಾಗೂ ಬೆರಳಚ್ಚುಗಾರರ ಹುದ್ದೆ ನೇಮಕಾತಿಯಲ್ಲಿ ಉತ್ತೀರ್ಣರಾದ 661 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು 2019ರ ನವೆಂಬರ್ 13 ರಂದು ಪ್ರಕಟಿಸಲಾಗಿತ್ತು.
ಆ ನಂತರ ಅಭ್ಯರ್ಥಿಗಳ ಸಿಂಧುತ್ವ ಹಾಗೂ 371(ಜೆ ) ಹಾಗೂ ಇತರೆ ದಾಖಲಾತಿಗಳನ್ನು ಪರಿಶೀಲಿಸಿ ನೇಮಕಾತಿ ಆದೇಶ ನೀಡಲಾಗಿ; 537 ಅಭ್ಯರ್ಥಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಾರಿಗೆ, ಅಂಗವಿಕಲ, ಸಹಕಾರ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳು ಉಳಿದ 124 ಅಭ್ಯರ್ಥಿಗಳಿಗೆ ಇಲ್ಲಿಯವರೆಗೂ ನೇಮಕಾತಿ ಆದೇಶ ನೀಡಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ
ನೇಮಕಾತಿ ಪ್ರಕ್ರಿಯೆ ನಡೆದು 4 ವರ್ಷ ಕಳೆದಿದ್ದು ಯಾವುದೇ ಉದ್ಯೋಗ ಇಲ್ಲದ ಈ 124 ಅಭ್ಯರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದಿರುವ ಅಭ್ಯರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ, ನೇಮಕಾತಿ ಆದೇಶದ ವಿಳಂಬದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಕೂಡಲೇ ಈ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ದೊರಕಿಸಿಕೊಡುವ ಮೂಲಕ ಬಡ ಕುಟುಂಬದ ಅಭ್ಯರ್ಥಿಗಳ ಬಾಳಿಗೆ ಬೆಳಕಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


