ರಾಜ್ಯ

ನಾಡು, ಗಡಿ ಹಾಗೂ ಭಾಷೆ ಮೀರಿದ ರಾಜ್ಯ ಸರ್ಕಾರದ ಅನ್ನ ದಾಸೋಹ: ಕಾರ್ಮಿಕರಲ್ಲಿ ಸಂತಸದ ಹೊನಲು

ತುತ್ತು ಅನ್ನಕ್ಕಾಗಿ ಸಾವಿರಾರು ಕಿ.ಮೀ. ದೂರದ ಊರುಗಳಿಂದ ಬಂದು ರಾಜ್ಯದಲ್ಲಿ, ಅದರಲ್ಲೂ ರಾಜಧಾನಿಯಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಕೊವಿಡ್-19 ಹಿನ್ನೆಲೆಯಲ್ಲಿ ಘೋಷಿಸಿರುವ ಲಾಕ್ ಡೌನ್ ನಿಂದ ಕಂಗಾಲಾಗಿದ್ದಾರೆ.

ನಾಡು, ಗಡಿ ಹಾಗೂ ಭಾಷೆ ಮೀರಿದ ರಾಜ್ಯ ಸರ್ಕಾರದ ಅನ್ನ ದಾಸೋಹ: ಕಾರ್ಮಿಕರಲ್ಲಿ ಸಂತಸದ ಹೊನಲು
ಕೂಲಿ ಕಾರ್ಮಿಕರು
Published On :

ಬೆಂಗಳೂರು: ತುತ್ತು ಅನ್ನಕ್ಕಾಗಿ ಸಾವಿರಾರು ಕಿ.ಮೀ. ದೂರದ ಊರುಗಳಿಂದ ಬಂದು ರಾಜ್ಯದಲ್ಲಿ, ಅದರಲ್ಲೂ ರಾಜಧಾನಿಯಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಕೊವಿಡ್-19 ಹಿನ್ನೆಲೆಯಲ್ಲಿ ಘೋಷಿಸಿರುವ ಲಾಕ್ ಡೌನ್ ನಿಂದ ಕಂಗಾಲಾಗಿದ್ದಾರೆ. 

ಇಂತಹ ಕಂಗೆಟ್ಟ ಜನರಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ “ದಾಸೋಹ” ಹೆಸರಿನ ಅನ್ನದಾನ ಕಾರ್ಯಕ್ರಮ ವಿಶೇಷವಾಗಿ ವಲಸೆ ಕಾರ್ಮಿಕರಿಗೆ ವರದಾನವಾಗಿದೆ. ಹಂಗರ್ ಹೆಲ್ಪ್ ಲೈನ್ ಎಂದೇ ಜನಪ್ರಿಯವಾಗಿರುವ ದಾಸೋಹದ ಶುಲ್ಕ-ರಹಿತ ಸಹಾಯವಾಣಿ 155214 ಗೆ ಬೆಂಗಳೂರು ಮಹಾ ನಗರದ ಯಾವುದೇ ಮೂಲೆಯಲ್ಲಿ ಆಹಾರವಿಲ್ಲದೆ ಬಳಲುತ್ತಿರುವ ಕಟ್ಟಡ ಕಾರ್ಮಿಕರು ಅಥವಾ ವಲಸೆ ಕಾರ್ಮಿಕರು ಸಂಪರ್ಕಿಸಿದಲ್ಲಿ ಅವರ ವಿಳಾಸವನ್ನು ಖಚಿತಪಡಿಸಿಕೊಂಡು, ಎಷ್ಟು ಮಂದಿ ಇದ್ದಾರೆ? ಎಷ್ಟು ಊಟದ ಅಗತ್ಯವಿದೆ? ಎಷ್ಟು ದಿನಗಳು ಊಟದ ಅವಶ್ಯಕತೆ ಇದೆ? ಎಂಬ ಅಂಶಗಳನ್ನು ಕಲೆ ಹಾಕಿ, ಖಾಸಗಿ ಹಾಗೂ ನೋಂದಾಯಿತ ಸ್ವಯಂ ಸೇವಕರ ಮೂಲಕ ಆ ಜನರಿಗೆ ಅವರಿದ್ದಲ್ಲೇ ಊಟ ದೊರಕಿಸಿಕೊಡುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. 

ಈ ಪವಿತ್ರ ಕಾರ್ಯಕ್ರಮದಲ್ಲಿ ನಾಗರೀಕ ರಕ್ಷಣಾ ದಳ( ಸಿವಿಲ್ ಡಿಫೆನ್ಸ್ ) ಹಾಗೂ ಗೃಹ ರಕ್ಷಕ ದಳ( ಹೋಂ ಗಾಡ್ರ್ಸ್ ) ಕೂಡಾ ಕಾರ್ಮಿಕ ಇಲಾಖೆಯ ಬೆಂಬಲಕ್ಕೆ ಬೆನ್ನೆಲುಬಾಗಿ ನಿಂತಿದೆ. ಇದೀಗ, ಈ ವ್ಯವಸ್ಥೆಯು ರಾಜ್ಯದ ಎಲ್ಲಾ ಪ್ರಮುಖ ನಗರಗಳು ಹಾಗೂ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. 

ಪ್ರತಿ ದಿನ ಕಾರ್ಮಿಕ ಇಲಾಖೆಯ ಮೂಲಕ ವಿವಿಧ ಕಾರ್ಮಿಕ ಸಂಘಗಳು ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ಲಕ್ಷಾಂತರ ಬಡ ಕಾರ್ಮಿಕರಿಗೆ ದಿನಕ್ಕೆ ಎರಡು ಬಾರಿ ಶುಚಿ ಮತ್ತು ರುಚಿಯಾದ ಊಟ ನೀಡಲಾಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ದಾನಿಗಳನ್ನೂ ಸಂಪರ್ಕಿಸಿ ಬಾಣಸಿಗರ ಪಡೆಯಿಂದ ಆಹಾರ ತಯಾರಿಸಿ, ಅದನ್ನು ಪೊಟ್ಟಣಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಆಹಾರ ವಿತರಣೆಯಲ್ಲಿಯೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕ ಸಂಘಟನೆಗಳು ಹಾಗೂ ಪ್ರಮುಖ ಕಾರ್ಮಿಕ ಮುಖಂಡರು ಈ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಮನಾರ್ಹ ಅಂಶ ಎಂದರೆ, ರಾಜ್ಯ ಸರ್ಕಾರ ಕಳುಹಿಸಿಕೊಟ್ಟ ಆಹಾರವನ್ನು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಅದರಲ್ಲೂ ಸಂಕಷ್ಟದಲ್ಲಿರುವ ಕಾರ್ಮಿಕರು ಇರುವಡೆಗೆ ತಮ್ಮ ಸ್ವಂತದ ವಾಹನಗಳಲ್ಲಿಯೇ ಸಾಗಿಸಿ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿರುವ ದೊಡ್ಡ ನಾಗಮಂಗಲ ಪ್ರದೇಶದಲ್ಲಿ ಉಳಿದು 
ಕೊಂಡಿರುವ ಹೊರ ರಾಜ್ಯದ ಸಾವಿರಾರು ಕಾರ್ಮಿಕರು ದಾಸೋಹ ಯೋಜನೆಯ ಆಹಾರದ ಪೊಟ್ಟಣಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕರು ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸಿ, ಮನದುಂಬಿ ಮಾತನಾಡಿದ ಕ್ಷಣ ಮಾನವೀಯತೆಯ ಪರಾಕಾಷ್ಠೆಯನ್ನು ಹೊರಹೊಮ್ಮಿಸುವಂತಿತ್ತು. 

ಇದೇ ಪ್ರದೇಶದ ವಾರ್ಡ್ ನಂಬರ್ 191 ರಲ್ಲಿ ದಿನಕ್ಕೆ ಎರಡು ಬಾರಿ ಮೂರು ಸಾವಿರಕ್ಕೂ ಹೆಚ್ಚಿನ ಜನರಿಗೆ ಸರ್ಕಾರದ ದಾಸೋಹ ಯೋಜನೆಯಡಿ ಆಹಾರ ಒದಗಿಸಲಾಗುತ್ತಿದೆ. ಅಲ್ಲಿನ ಕಾರ್ಮಿಕ ಮುಖಂಡ ಪ್ರದೀಪ್ ಮಾತನಾಡಿ ರಾಜ್ಯ ಸರ್ಕಾರದ ಈ ಕ್ರಮದಿಂದ ಕಟ್ಟಡ ಕಾರ್ಮಿಕರಲ್ಲಿ ತಮ್ಮನ್ನು ಕಾಪಾಡುವ ಸರ್ಕಾರವಿದೆ ಎಂಬ ಕೃತಜ್ಞತಾ ಭಾವ ಇದೆ. ರಾಜ್ಯ ಸರ್ಕಾರದ ದಾಸೋಹ ಕಾರ್ಯಕ್ರಮಕ್ಕೆ ಧನ್ಯವಾದ ಸಲ್ಲಿಸಿದರು.

ಅಂತೆಯೇ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೂ ಕೂಡಾ ಕೋವಿಡ್ ವಾರಿಯರ್ಸ್ ಎಂಬ ಹೆಸರಿನಲ್ಲಿ ಕೋವಿಡ್ ಸೇನಾನಿಗಳ ಬೃಹತ್ ಪಡೆಯನ್ನೇ ರಚಿಸಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಂಡಿದ್ದು, ಮುಖ್ಯವಾಗಿ ಲಾಕ್ಡೌನ್ನಿಂದ ಕಷ್ಟ-ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ವರ್ಗದ ಜನರಿಗೆ ಟೆಲಿಗ್ರಾಂ ಆಪ್ ಮೂಲಕ ಸಕಾಲಿಕ ಹಾಗೂ ಸೂಕ್ತ ಸಲಹೆಗಳನ್ನು ನೀಡುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಟೆಲಿಗ್ರಾಂ ಗುಂಪಿಗೆ 22,000 ಕ್ಕೂ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ. ಯಾವುದೇ ಸಮಯದಲ್ಲಿ ನೋಡಿದರೂ ಗುಂಪಿನ ಶೇಕಡಾ 10 ರಷ್ಟು ಮಂದಿ ಆನ್ಲೈನ್ ನಲ್ಲಿ ವಿಚಾರ ವಿನಿಮಯವನ್ನು ವೀಕ್ಷಿಸುತ್ತಿರುತ್ತಾರೆ. ದಿನದ 24 ಗಂಟೆ ಹಾಗೂ ವಾರದ ಏಳೂ ದಿನಗಳು ಒಂದು ನೂರಕ್ಕೂ ಹೆಚ್ಚು ಅನುಭವೀ ಅಧಿಕಾರಿಗಳು, ತಜ್ಞ ವೈದ್ಯರು ಮತ್ತು ಸ್ವಯಂ ಸೇವಕರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. 

ಒಂದೇ ಮಾತಿನಲ್ಲಿ ಬಣ್ಣಿಸಬಹುದಾದರೆ, ಕೊರೊನಾ ವೈರಸ್-19 ರ ಮಹಾಮಾರಿಯಿಂದ ಘೋಷಿಸಲ್ಪಟ್ಟಿರುವ ಈ ಲಾಕ್ಡೌನ್ 2020 ರಲ್ಲಿ ನಮ್ಮೆಲ್ಲರನ್ನೂ ಮಾನವೀಯತೆಯ ಬಾಂಧವ್ಯವನ್ನು ಬೆಸೆಯುವ ವಿಶೇಷ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.