ಭಾರೀ ಮಳೆಗೆ ಒಡೆದ ದೊಡ್ಡಬಿದರಕಲ್ಲು ಕೆರೆ: ನೀರಿನ ಮಟ್ಟ ಕಂಡು ಭೀತಿಗೊಳಗಾದ ಜನತೆ
ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿೀ ಮಳೆಗೆ ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದು ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರಿನ ಮಟ್ಟ ಕಂಡ ಜನತೆ ಭೀತಿಗೊಳಗಾಗಿದ್ದಾರೆ.

ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿೀ ಮಳೆಗೆ ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದು ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರಿನ ಮಟ್ಟ ಕಂಡ ಜನತೆ ಭೀತಿಗೊಳಗಾಗಿದ್ದಾರೆ.
ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆ ಬಳಕೆಯ ವಸ್ತುಗಳು ಸೇರಿದಂತೆ 100ಕ್ಕೂ ಹೆಚ್ಚು ವಾನಹಗಳಿಗೆ ಹಾನಿಯಾಗಿವೆ. 8ನೇ ಮೈಲಿ ಬಳಿಯ ದೊಡ್ಡ ಬಿದರಕಲ್ಲು ಕೆರೆ ತುಂಬಿ ಕೋಡಿ ಒಡೆದು ಯಶವಂತಪುರ ವಿಧಾನಸಭಾ ಕ್ಷೇತ್ರದ ಭವಾನಿ ನಗರ, ಅನ್ನಪೂರ್ಣೇಶ್ವರಿ ಲೇಔಟ್, ಮುನೇಶ್ವರ ಲೇಔಟ್ ಹಾಗೂ ಅಂದಾನಪ್ಪ ಲೇಔಟ್ನ ತಗ್ಗು ಪ್ರದೇಶಗಳು ಜಲಾವೃತಗೊಂಡು ಅಕ್ಷರಶಃ ದ್ವೀಪಗಳಾಗಿ ರೂಪುಗೊಂಡಿದ್ದವು. ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ನಡು ರಸ್ತೆಗಳಲ್ಲಿ ದೊಡ್ಡ ಕಂದಕಗಳೇ ಸೃಷ್ಟಿಯಾಗಿವೆ.
ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕಾರು, ಬೈಕ್ ಹಾಗೂ ಆಟೋ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ನಾಶವಾಗಿವೆ. ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಬಟ್ಟೆ, ಪಾತ್ರೆ, ದಿನಸಿ ವಸ್ತುಗಳು, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ವಸ್ತುಗಳು ನೀರು ಪಾಲಾಗಿವೆ. ಬುಧವಾರ ರಾತ್ರಿ ಇಡೀ ನಿವಾಸಿಗಳು ಮನೆಯಿಂದ ನೀರು ಹೊರ ಹಾಕುವುದಕ್ಕೆ ಹರಸಾಹಸ ಪಡಬೇಕಾಯಿತು. 41 ಎಕರೆಯ ದೊಡ್ಡಬಿದರಕಲ್ಲು ಕೆರೆ ಕೋಡಿ ನೀರು ಬಡಾವಣೆಗಳಿಗೆ ನುಗ್ಗಿತ್ತು. 8 ಜೆಸಿಬಿಗಳಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಕೋಡಿ ನೀರು ಮಾದವಾರ ಕೆರೆ ಹೋಗುವಂತೆ ಮಾಡಲಾಗಿದೆ.
ದೊಡ್ಡಬಿದರಕಲ್ಲು ಪ್ರವಾಹ ಪ್ರದೇಶಕ್ಕೆ ಗುರುವಾರ ಬೆಳಿಗ್ಗೆ ಬೇಟಿ ನೀಡಿ ಬಿಬಿಎಂಪಿ ಮೇಯರ್ ಪರಿಶೀಲನೆ ನೀಡೆಸಿದರು.
ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಅವರು ಭೇಟಿ ನೀಡಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದರು.
ಪ್ರವಾಹ ಉಂಟಾದ ಭವಾನಿ ನಗರ, ಅನ್ನಪೂರ್ಣೇಶ್ವರಿ ಲೇಔಟ್, ಮುನೇಶ್ವರ ಲೇಔಟ್ ಹಾಗೂ ಅಂದಾನಪ್ಪ ಲೇಔಟ್ ನಲ್ಲಿ ಸುಮಾರು 100ಕ್ಕೂ ಹೆಚ್ಚು ವಾಹನಗಳು ಹಾನಿಗೊಳಗಾಗಿವೆ. ಈ ಹಿನ್ನಲೆಯಲ್ಲಿ ವಿಮಾ ಕಂಪನಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲೇ ತಪಾಸಣೆ ಮಾಡುವುದಕ್ಕೆ ಸೂಚನೆ ನೀಡಲಾಗುವುದು. ಇನ್ನು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ಹಾನಿಗೊಳಗಾಗಿರುವ ಬಗ್ಗೆ ಪಾಲಿಕೆಯ ಕಂದಾಯ ಅಧಿಕಾರಿಗಳು ಅಂದಾಜು ಮಾಡಿ ವರದಿ ನೀಡಲಿದ್ದಾರೆ. ನಂತರ ನಿಯಮದ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಡಬ್ಲ್ಯೂಎಸ್ಎಸ್'ಬಿಯನ್ನು ದೂಷಿಸುವಂತಿಲ್ಲ. ಬಿಬಿಎಂಪಿ ದಂಡವನ್ನು ವಿಧಿಸುವುದಿಲ್ಲ. ಹಾನಿಗೊಳಗಾಗಿರುವ ಪ್ರದೇಶಗಳನ್ನು ಸರಿಪಡಿಸುವಲ್ಲಿ ಬಿಬಿಎಂಪಿ ಕೆಲಸ ಮಾಡಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


