ರಾಜ್ಯ

ಹೆಚ್ ಎನ್ ವ್ಯಾಲಿ ಮೊದಲ ಪಂಪ್ ಆರಂಭ: ಬಾಗಲೂರು ಕೆರೆಗೆ ನೀರು

ಅಭಾವ ಪರಿಸ್ಥಿತಿಯಿಂದ ಕೆಂಗೆಟ್ಟಿರುವ ಅವಿಭಜಿತ ಕೋಲಾರ ಜಿಲ್ಲೆ ...

ಹೆಚ್ ಎನ್ ವ್ಯಾಲಿ ಮೊದಲ ಪಂಪ್ ಆರಂಭ: ಬಾಗಲೂರು ಕೆರೆಗೆ ನೀರು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಅಭಾವ ಪರಿಸ್ಥಿತಿಯಿಂದ ಕೆಂಗೆಟ್ಟಿರುವ ಅವಿಭಜಿತ ಕೋಲಾರ ಜಿಲ್ಲೆ ಅಂತರ್ಜಲವೃದ್ಧಿಗಾಗಿ ಜಾರಿಗೊಳಿಸಲಾದ ಯೋಜನೆಗಳ ಪೈಕಿ ಕೆ ಸಿ ವ್ಯಾಲಿ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. 

ಅತ್ತ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಹೆಚ್.ಎನ್. ವ್ಯಾಲಿ ಕಾಮಗಾರಿ ಚುರುಕು ಪಡೆದುಕೊಂಡಿದೆ. ಇದರ ಪರಿಣಾಮ ನಿನ್ನೆ ಮೊದಲ ಮೋಟಾರ್ ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದೆ.

ಬೆಂಗಳೂರಿನ ತ್ಯಾಜ್ಯ ಸಂಸ್ಕರಿತ ನೀರನ್ನು ಬಳಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ಇದಾಗಿದ್ದು, ಈ ಯೋಜನೆಯಡಿ 65 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಯ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ನಡೆಸುತ್ತಿರುವ ಎಂ ಇ ಐ ಎಲ್ ಸಂಸ್ಥೆಯು ಇದಕ್ಕಾಗಿ ಹೆಣ್ಣೂರಿನಲ್ಲಿ ಸುಸಜ್ಜಿತ ಪಂಪ್‌ಹೌಸ್ ನಿರ್ಮಿಸಿದ್ದು, ಶನಿವಾರ ಸಣ್ಣ ನೀರಾವರಿ ಇಲಾಖೆ ಉನ್ನತಾಧಿಕಾರಿಗಳು ಪಂಪ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು.

ಈ ಯೋಜನೆಯಡಿ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂರು ಶುದ್ಧೀಕರಣ ಘಟಕಗಳಿಂದ ನೀರನ್ನು ಪಡೆದು ಬರಪೀಡಿತ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ ಅಂತರ್ಜಲವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದಾರೆ. ಬೆಂಗಳೂರಿನ ಮೂರು ಶುದ್ಧಿಕರಣ ಘಟಕಗಳಿಂದ ಒಟ್ಟಾರೆ 210 ಎಂ.ಎಲ್.ಡಿ. ನೀರು ದೊರಕಲಿದ್ದು, ಈ ಪೈಕಿ ಈಗ ಚಾಲನೆ ನೀಡಲಾದ 750 ಕಿ.ವ್ಯಾ. ಮೋಟಾರ್ ನಿಂದ 40 ಎಂ.ಎಲ್.ಡಿ ನೀರನ್ನು ಹರಿಸಲಾಗುವುದು.

ನಿನ್ನೆಯಿಂದ ಹೆಣ್ಣೂರು ನೀರು ಶುದ್ಧೀಕರಣ ಘಟಕದಿಂದ ಬಾಗಲೂರು ಕೆರೆವರೆಗೆ ಅಂದರೆ 12 ಕಿ.ಮೀ.ನಷ್ಟು ದೂರ 1660 ಎಂ.ಎಂ. ವ್ಯಾಸದ ಎಂ.ಎಸ್. ಪೈಪ್‌ನಲ್ಲಿ ನೀರು ಹರಿಯಲಿದೆ. ಶುದ್ಧೀಕರಿಸಿದ ನೀರಿನ ಸಮರ್ಪಕ ಹರಿವಿಗೆ ಅನುಕೂಲವಾಗುವಂತೆ ಹೆಣ್ಣೂರು ಘಟಕದ ಸರ್ಜ್ ವೆಸಲ್ ಅನ್ನು ನಿರ್ಮಿಸಲಾಗಿದೆ.

ಹೆಚ್.ಎನ್. ವ್ಯಾಲಿ ಯೋಜನೆಯಡಿ 114 ಕಿ.ಮೀ ನೀರನ್ನು ಹರಿಸಬೇಕಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಅಧಿಕ ಸಾಮರ್ಥ್ಯದ ಮೋಟಾರ್ ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಪಂಪ್‌ಹೌಸ್‌ಗಳಲ್ಲಿ ಮೂರು ಮತ್ತು ಹೆಚ್ಚುವರಿ ಒಂದು ಅಂದರೆ ನಾಲ್ಕು ಅಧಿಕ ಸಾಮರ್ಥ್ಯದ ಮೊಟಾರ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಎಂ.ಇ.ಐ.ಎಲ್. ಉಪಾಧ್ಯಕ್ಷ ಸುಧೀರ್ ಮೋಹನ್ ತಿಳಿಸಿದರು.

ಪ್ರಸ್ತುತ ಮೂರು ಪಂಪ್‌ಹೌಸ್‌ಗಳ ಪೈಕಿ ಒಂದು ಪಂಪ್‌ಹೌಸ್ ಕಾರ್ಯನಿರ್ವಹಣೆ ಆರಂಭವಾಗಿದ್ದು, ಹೆಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿಯಲಾರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.