ದಾನಿಯ ಹೃದಯ ಬಾಗಲಕೋಟೆ ವ್ಯಕ್ತಿಗೆ ಮರುಜನ್ಮ ನೀಡಿತು!
ಹೃದಯ ಕಸಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆಯ ಮೂಲದ 38 ವರ್ಷದ ವ್ಯಕ್ತಿ ಮರುಜೀವ ಪಡೆದಿದ್ದಾನೆ.

ಬೆಂಗಳೂರು: ಹೃದಯ ಕಸಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆಯ ಮೂಲದ 38 ವರ್ಷದ ವ್ಯಕ್ತಿ ಮರುಜೀವ ಪಡೆದಿದ್ದಾನೆ. ಮೈಸೂರು ಮೂಲದ 28 ವರ್ಷದ ಯುವಕ ಮೆದುಳು ಗಾಯಗೊಂಡು ಆಸ್ಪತ್ರೆ ಸೇರಿದ ನಂತರ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿದಿದೆ. ಆಗ ಆ ಯುವಕನ ಕುಟುಂಬ ಯುವಕನ ಅಂಗಾಂಗ ದಾನಕ್ಕೆ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
ಇತ್ತ ಬಾಗಲಕೋಟೆಯ ವ್ಯಕ್ತಿ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಒಂಬತ್ತು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ವ್ಯಕ್ತಿಯ ಎಡ ಅಪಧಮನಿ ಹಾಗೂ ಬಲ ಅಪಧಮನಿಗಳು ಪರಸ್ಪರ ಸ್ಥಳಾಂತರವಾಗಿದ್ದು ಪರಸ್ಪರ ವಿರುದ್ಧ ಕಾರ್ಯಗಳಲ್ಲಿ ತೊಡಗಿದ್ದವು."ಸಾಮಾನ್ಯವಾಗಿ ಎಡ ಅಪಧಮನಿ ದೇಹದ ಇತರೆ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಿದರೆ ಬಲ ಅಪಧಮನಿ ಶ್ವಾಸಕೋಶಗಳಿಗೆ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಈ ರೋಗಿಯಲ್ಲಿ ಅದು ತದ್ವಿರುದ್ಧವಾಗಿದ್ದು ಆತನಲ್ಲಿ ಸಮಸ್ಯೆಯನ್ನು ಸೃಷ್ಟಿಸಿತ್ತು."ನಾರಾಯಣ ಹೆಲ್ತ್ ಸಿಟಿಯ ಹಾರ್ಟ್ & ಲಂಗ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ಜೂಲಿಯಸ್ ಪುನ್ನೆನ್ ಹೇಳಿದ್ದಾರೆ.
ಹೃದಯ ಕಸಿ ಮೂಲಕ ಮಾತ್ರ ಅವರ ಸ್ಥಿತಿಯನ್ನು ಸುಧಾರಿಸಬಹುದಾಗಿರುವುದರಿಂದ, ರಾಜ್ಯ ಅಂಗಾಂಗ ಕಸಿ ಸಂಸ್ಥೆಯಾದ ಜೀವ ಸಾರ್ಥಕ್ಯದಲ್ಲಿ ನೊಂದಾಯಿಸಲು ವೈದ್ಯರು ವಿನಂತಿಸಿದರು. ಅದೃಷ್ಟವಶಾತ್, ಅಲ್ಲಿ ಅವರಿಗೆ ಸಮರ್ಪಕ ಹೊಂದಿಕೆಯಾಗಬಲ್ಲ ಹೃದಯ ಸಿಕ್ಕಿದೆ. ಹೃದಯವನ್ನು ಗುರುವಾರ ರಾತ್ರಿ ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆಯಿಂದ ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ರವಾನಿಸಲಾಗಿದೆ. 170 ಕಿ.ಮೀ ದೂರವನ್ನು 2 ಗಂಟೆಗಳ 15 ನಿಮಿಷಗಳ ಅವಧಿಯಲ್ಲಿ ಕ್ರಮಿಸಲಾಗಿದೆ.
ಕಡಿಮೆ ಆರ್ಥಿಕ ಸ್ತರಕ್ಕೆ ಸೇರಿದ ಈ ರೋಗಿಯು ಕರ್ನಾಟಕ ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾಟ್ರಸ್ಟ್ (ಸಾಸ್ಟ್) ಅಡಿಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಎಂದು ಕರೆಯಲಾಗುವ ಆರೋಗ್ಯ ಯೋಜನೆಯ ಫಲಾನುಭವಿ. ವಾಜಪೇಯಿ ಆರೋಗ್ಯಶ್ರೀ ಯೋಜನೆಯು ಕರ್ನಾಟಕದ ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕುಟುಂಬಗಳಿಗೆ ಹಂತಹಂತವಾಗಿ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಇದರೊಂದಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ನಡೆದ ಮೊದಲ ಹೃದಯ ಕಸಿ ಶಸ್ತ್ರಚಿಕಿತ್ಸೆ ಇದಾಗಿದೆ.ಒಟ್ಟಾರೆ ನಾಲ್ಕು ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


