ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ 10 ಕೋಟಿ ರೂ. ಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರು: ಸಿಎಂ
ಪ್ರವಾಹ ಸಂತ್ರಸ್ತ ಗ್ರಾಮಗಳ ಪುನಶ್ಚೇತನಕ್ಕೆ ಹತ್ತು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಆಯಾ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಂಗಳೂರು: ಪ್ರವಾಹ ಸಂತ್ರಸ್ತ ಗ್ರಾಮಗಳ ಪುನಶ್ಚೇತನಕ್ಕೆ ಹತ್ತು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಆಯಾ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉದ್ದಿಮೆದಾರರನ್ನು ಆಹ್ವಾನಿಸಿ ಮುಖ್ಯಮಂತ್ರಿಗಳು, ನೆರೆ ಬಾಧಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು. ಸರ್ಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಭರವಸೆ ನೀಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. 23 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹ ಸಮಸ್ಯಾತ್ಮಕ ಹಾಗೂ 56 ಸಾವಿರ ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂದೂ ಘೋಷಿಸಲಾಗಿದೆ.
ಸಂತ್ರಸ್ತರ ನೆರವಿಗೆ ಕೈಗಾರಿಕೋದ್ಯಮಿಗಳು ಉದಾರವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದರು. 23 ಜಿಲ್ಲೆಗಳ 200 ಗ್ರಾಮಗಳ ಜನ, ಜಾನುವಾರುಗಳನ್ನು ಸ್ಥಳಾಂತರಿಸಬೇಕಾದ ಅಗತ್ಯವಿದ್ದು ಉದ್ದಿಮೆದಾರರು ಉದಾರ ದೇಣಿಗೆ ನೀಡುವಂತೆ ಯಡಿಯೂರಪ್ಪ ಕೋರಿದರು.
ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಿದ ಸಂಸ್ಥೆ ಹೆಸರನ್ನೇ ಆ ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಿದ್ದು, ಹಣ ನೀಡುವ ಸಂಸ್ಥೆ ಆ ಗ್ರಾಮವನ್ನು ದತ್ತು ಪಡೆದುಕೊಂಡಂತೆ ಎಂದು ಹೇಳಿದರು.
ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ತಗ್ಗಿದ್ದು ಸಂಪೂರ್ಣ ಚಿತ್ರಣ, ನಷ್ಟ ತಿಳಿಯಲು ಇನ್ನು ಕೆಲವು ದಿನ ಬೇಕಾಗಲಿದೆ ಎಂದರು. ಬಟ್ಟೆ, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ನೆರವಾಗಲು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕೈಗಾರಿಕೋದ್ಯಮಿಗಳು ಬಯಸುವ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಸಂಸ್ಥೆ ಉದ್ಯಮ ನಡೆಸಲು ಬೇಕಾದ ಮೂಲಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಚಿನೆ ನೀಡಿರುವುದಾಗಿ ತಿಳಿಸಿದ ಅವರು, ಒಂದು ವೇಳೆ ಅನಗತ್ಯ ಸಮಸ್ಯೆ ಆಗುತ್ತಿದ್ದರೆ ತಮ್ಮ ಗಮನಕ್ಕೆ ತರುವಂತೆ ಹೇಳಿದರು.
ಇದೇ ವೇಳೆ ಸರಕಾರದ ಮುಖ್ಯಕಾರ್ಯದರ್ಶಿ ಭಾಸ್ಕರ್‌ರಾವ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜಲ್ ಕೃಷ್ಣ ಉಪಸ್ಥಿತರಿದ್ದರು.
ಈವರೆಗಿನ ಕಂಪನಿಗಳ ಕೊಡುಗೆ:
- ಬ್ರಿಟಾನಿಯಾ ಕಂಪನಿಯಿಂದ ಆಹಾರ ಪದಾರ್ಥಗಳು
- ಟಿವಿಎಸ್ ಮೋಟಾರು ಸಂಸ್ಥೆಯಿಂದ 1 ಕೋಟಿ ರೂ.
- ಜಿಎಸ್‌ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ನಿಂದ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ
- ಶಾಹಿ ಎಕ್ಸ್‌ಪೋರ್ಟ್ಸ್ ನಿಂದ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು
ನೆರವು ನೀಡಲು ಮುಂದಾಗಿರುವ ಸಂಸ್ಥೆಗಳು
- ಕಾರ್ಪೋರೇಷನ್ ಬ್ಯಾಂಕ್ ನಿಂದ ದೇಣಿಗೆ
- ಕ್ರೆಡಾಯ್ 3 ಕೋಟಿ ರೂಪಾಯಿ
- ಟೊಯೋಟಾ ಸಂಸ್ಥೆಯಿಂದ 2 ಕೋಟಿ ರೂ
- ಲೋಗೋಸ್‌ಗ್ರೂಪ್ 25 ಲಕ್ಷ ರೂ
- ಯುನೈಟೆಡ್ ಟೆಕ್ನಾಲಜಿಸ್ ನಿಂದ ಅಗತ್ಯ ಮೂಲಸೌಕರ್ಯ
- ಜೆಕೆ ಸಿಮೆಂಟ್ ನಿಂದ ಆಹಾರ ಪದಾರ್ಥಗಳ ವಿತರಣೆ
- ವೋಲ್ವೋ ಗ್ರೂಪ್‌ನ ನೌಕರರ ಒಂದು ದಿನದ ಸಂಬಳ ಸೇರಿದಂತೆ ಇತರೆ ಕಂಪನಿಗಳಿಂದ ಸಹ ತಮ್ಮನೆರವಿನ ಭರವಸೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


