ರಾಜ್ಯ

ಕೆಪಿಎಸ್ ಸಿ ವಿವಾದ: 27 ಅರ್ಹರಿಗೆ ನೇಮಕಾತಿ ಆದೇಶ - ಸರ್ಕಾರ ಸ್ಪಷ್ಟನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ಪರಿಷ್ಕೃತ ನೇಮಕಾತಿ...

ಕೆಪಿಎಸ್ ಸಿ ವಿವಾದ: 27 ಅರ್ಹರಿಗೆ ನೇಮಕಾತಿ ಆದೇಶ - ಸರ್ಕಾರ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ಪರಿಷ್ಕೃತ ನೇಮಕಾತಿ ಪಟ್ಟಿಯ ಅನುಸಾರ  27 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ 
ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ,  ಪರಿಷ್ಕೃತ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಪತ್ರ ನೀಡುವಂತೆ ತಾಕೀತು ಮಾಡಿತ್ತು. ಅದರಂತೆ ರಾಜ್ಯ ಸರ್ಕಾರ ಗುರುವಾರ ಈ ಮಾಹಿತಿ ನೀಡಿದೆ.
ಆದರೆ, ನೇಮಕಗೊಂಡ ಅಭ್ಯರ್ಥಿಗಳಿಗೆ ಹುದ್ದೆಯ ನಿಯೋಜನೆಯಾಗಿಲ್ಲ ಎಂಬ ವಿಷಯವನ್ನು ಗಮನಿಸಿದ ನ್ಯಾಯಪೀಠ, ತಕ್ಷಣ ಅವರಿಗೆ ಕರ್ತವ್ಯದ ಸ್ಥಳ ಹಾಗೂ ಹುದ್ದೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. 
ನ್ಯಾಯಾಲಯದ ಆದೇಶದ ಅನುಸಾರ ಕಳೆದ ಜ. 25ರಂದು ಹೊರಡಿಸಲಾದ ಗೆಜೆಟ್‌ನಂತೆ 140 ಮಂದಿ ಅಧಿಕಾರಿಗಳಿಗೆ ಏಪ್ರಿಲ್ 15ರೊಳಗೆ ಹಿಂಬಡ್ತಿ-ಮುಂಬಡ್ತಿ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿತು. 
1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು, ಅರ್ಹರಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿತ್ತು. ಆದರೆ, ರಾಜ್ಯ ಸರ್ಕಾರ ಈ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ನಗರದ ಎಸ್. ಶ್ರೀನಿವಾಸ್ ಮತ್ತಿತರ ಅಭ್ಯರ್ಥಿಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 
ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವ ಸಂಬಂಧ 2016ರ ಜೂ. 21ರಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ಪಾಲಿಸುವಂತೆ ಸೂಚನೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.