ಮೈಸೂರು: ಕಾರು ಅಪಘಾತದಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ಸೇರಿ ನಾಲ್ವರಿಗೆ ಗಾಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು ಅವರ ಕೈ ಮುರಿದಿದೆ ಎಂದು...

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು ಅವರ ಕೈ ಮುರಿದಿದೆ ಎಂದು ವರದಿಗಳು ತಿಳಿಸಿವೆ. ಅವರ ಜೊತೆ ಕನ್ನಡದ ಹಿರಿಯ ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಮತ್ತೊಬ್ಬರು ಸಹ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ ಸುಮಾರು ಮೂರು ಗಂಟೆಯ ಸಮಯದಲ್ಲಿ ಅಪಘಾತ ನಡೆದಿದ್ದು, ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಮೂವರಿಗೂ ಗಾಯವಾಗಿದ್ದು, ಮೈಸೂರು-ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸುದ್ದಿ ಕೇಳುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ, ಬಂಧುಗಳು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಜೆಎಸ್ಎಸ್ ಅರ್ಬನ್ ಹಟ್ ಜಂಕ್ಷನ್ ಹತ್ತಿರ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದರ್ಶನ್ ಅವರು ಒಡೆಯ ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ತನ್ನ ಬಲಗೈಗೆ ಗಾಯವಾಗಿ ಶಸ್ತ್ರಚಿಕಿತ್ಸೆಗೆ ನಟ ದರ್ಶನ್ ಒಳಗಾಗಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ ಶಸ್ತ್ರಚಿಕಿತ್ಸೆ ಬಳಿಕ ವರ್ಗಾಯಿಸಲಾಗಿದೆ. ಉಳಿದ ಕಲಾವಿದರ ಸ್ಥಿತಿ ಕೂಡ ಸ್ಥಿರವಾಗಿದ್ದು, ಅಪಘಾತ ನಡೆಯುವ ವೇಳೆ ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿಲ್ಲ.
ಅಪಘಾತದ ಬಗ್ಗೆ ಮತ್ತು ನಟರ ಪರಿಸ್ಥಿತಿ ಬಗ್ಗೆ ಅವರ ಕುಟುಂಬಸ್ಥರಾಗಲಿ, ಸ್ನೇಹಿತರಾಗಲಿ ಹೆಚ್ಚಿನ ವಿವರ ನೀಡುತ್ತಿಲ್ಲ. ಕಾರು ಅಪಘಾತವಾದ ಬಗ್ಗೆ ಇದುವರೆಗೆ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ದರ್ಶನ್ ಅವರ ಕಾರು ಕೂಡ ನಾಪತ್ತೆಯಾಗಿದೆ.
ಮೈಸೂರಿನ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು ಇದೀಗ ಪೊಲೀಸರೇ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ದರ್ಶನ್ ಗೆ ಅಪಘಾತವಾಗಿರುವ ಬಗ್ಗೆ ಮಾಹಿತಿ ತಿಳಿದು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸಿ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆ ಹೊರಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


