ಸಿಎಂ ಹೆಚ್.ಡಿ.ಕೆ ತಾಂತ್ರಿಕ ಸಲಹೆಗಾರ ಎಂಕೆ ವೆಂಕಟ್ ರಾಮ್ ವೇತನ ಕೇವಲ ರು.101!
ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಚಿವರುಗಳು, ಸರ್ಕಾರಿ ಅಧಿಕಾರಿಗಳು ...

ಬೆಂಗಳೂರು: ಸರ್ಕಾರ ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಚಿವರುಗಳು, ಸರ್ಕಾರಿ ಅಧಿಕಾರಿಗಳು ಪ್ರಯತ್ನಿಸುವ ವಾತಾವರಣದಲ್ಲಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ಇದಕ್ಕೆ ಅಪವಾದವಾಗಿದ್ದಾರೆ.
ಮುಖ್ಯಮಂತ್ರಿಗಳಿಗೆ ತಾಂತ್ರಿಕ ಸಲಹೆಗಾರರಾಗಿರುವ ನಿವೃತ್ತ ಅಧಿಕಾರಿ ಎಂ ಕೆ ವೆಂಕಟ್ ರಾಮ್ ಅವರಿಗೆ ಸಂಪುಟದ ಸಚಿವ ಸ್ಥಾನಮಾನ ಇರುತ್ತದೆ. ಆದರೆ ವೆಂಕಟ್ ರಾಮ್ ಅವರು ತಮಗೆ ನೀಡಿದ ಸೌಲಭ್ಯವನ್ನು ಯಾವುದನ್ನೂ ಪಡೆಯುತ್ತಿಲ್ಲ. ತಾವು ಸರ್ಕಾರಕ್ಕೆ ಮಾಡುವ ಸೇವೆಗಾಗಿ ಅವರು ಪಡೆಯುತ್ತಿರುವ ವೇತನ ಕೇವಲ 101 ರೂಪಾಯಿ. ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದರಲ್ಲಿ ತಮಗೆ ಸರ್ಕಾರದಿಂದ ನೀಡಿರುವ ಮನೆ ಭತ್ಯೆ, ವೇತನಗಳನ್ನು ಹಿಂತೆಗೆದುಕೊಂಡು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಠೇವಣಿಯಿಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ವೆಂಕಟ್ ರಾಮ್, 25 ವರ್ಷಗಳ ಹಿಂದೆ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ ಹುದ್ದೆಯಿಂದ ನಿವೃತ್ತಿ ಪಡೆದೆ. ತಮ್ಮ ಜೀವನಕ್ಕ ಇಷ್ಟೊಂದು ನೀಡಿದ ರಾಜ್ಯಕ್ಕೆ ಏನಾದರೂ ಹಿಂತಿರುಗಿಸಿ ಕೃತಜ್ಞತೆ ಸಲ್ಲಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. 1962ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಆರಂಭಿಸಿ ನಂತರ ನೀರಾವರಿ, ಜಲಸಂಪನ್ಮೂಲ ಇಲಾಖೆಗಳಲ್ಲಿ ಕೆಲಸ ಮಾಡಿ 1993ರಲ್ಲಿ ನಿವೃತ್ತಿ ಪಡೆದೆ, ಈ ರಾಜ್ಯ ನನಗೆ ಎಲ್ಲ ಕೊಟ್ಟಿದೆ. ಹೀಗಾಗಿ ದಿನ ಭತ್ಯೆ, ಬೆಂಗಳೂರಿನಿಂದ ಹೊರಗೆ ಓಡಾಡಲು ಭತ್ಯೆ ಹಾಗೂ 101 ರೂಪಾಯಿಗಳನ್ನು ಹೊರತುಪಡಿಸಿ ಸರ್ಕಾರದಿಂದ ಬೇರೆ ಯಾವ ಭತ್ಯೆ ಮತ್ತು ಸೌಲಭ್ಯಗಳನ್ನು ಪಡೆಯುತ್ತಿಲ್ಲ ಎನ್ನುತ್ತಾರೆ.
ಇಂದು ವೆಂಕಟ್ ರಾಮ್ ಅವರಿಗೆ 80 ವರ್ಷ ವಯಸ್ಸು. ಮುಖ್ಯಮಂತ್ರಿಗಳಿಗೆ ಅನೇಕ ಅಂತರಾಜ್ಯ ಜಲ ವಿವಾದ, ನೀರಾವರಿ ಮತ್ತು ಇತರ ವಿಷಯಗಳಲ್ಲಿ ಅಗತ್ಯ ಸಲಹೆಗಳನ್ನು ನೀಡುತ್ತಾರೆ.
ವೆಂಕಟ್ ರಾಮ್ ಅವರು ಸರ್ಕಾರದಿಂದ 35 ಸಾವಿರ ರೂಪಾಯಿ ಪಿಂಚಣಿ, ಮನೆ ಭತ್ಯೆ 1 ಲಕ್ಷ ರೂಪಾಯಿ ಮತ್ತು ಸೇವೆಗೆ ನೇಮಕಾತಿಯಾದ ಸಂದರ್ಭದಲ್ಲಿ ಇದ್ದ ಇತರ ಸೌಲಭ್ಯಗಳನ್ನು ಪಡೆಯುವಲ್ಲಿ ಅರ್ಹತೆ ಪಡೆದಿದ್ದಾರೆ. ಅಲ್ಲದೆ ತಿಂಗಳಿಗೆ 1 ಸಾವಿರ ಇಂಧನ ಭತ್ಯೆ, ಪ್ರಯಾಣ ಭತ್ಯೆ ಪ್ರತಿ ಕಿಲೋ ಮೀಟರ್ ಗೆ 30 ರೂಪಾಯಿ, 21 ಲಕ್ಷದೊಳಗೆ ಕಾರು ಖರೀದಿಸಲು ಭತ್ಯೆ, 10 ಲಕ್ಷದೊಳಗಿನ ಮನೆ, ಕಚೇರಿ ಪೀಠೋಪಕರಣಗಳು ಮತ್ತು ಇತರ ಕೆಲವು ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುವ ಅರ್ಹತೆ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


