ರಾಜ್ಯ

ಹುಯೆನ್ ತ್ಸಾಂಗ್ ಚರಿತ್ರೆ ಆಧಾರಿತ 'ಮಹಾಪಯಣ' ಹಾಗೂ 'ಗಾಂಧಿ ವಿಶೇಷಾಂಕ' ಬಿಡುಗಡೆ

ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತೇ...

ಹುಯೆನ್ ತ್ಸಾಂಗ್ ಚರಿತ್ರೆ ಆಧಾರಿತ 'ಮಹಾಪಯಣ' ಹಾಗೂ 'ಗಾಂಧಿ ವಿಶೇಷಾಂಕ' ಬಿಡುಗಡೆ
ಮಹಾಪಯಣ ಬಿಡುಗಡೆ
Published On :
ಬೆಂಗಳೂರು: ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತೇ ಎಂಬ ವಿಚಾರದ ಜಿಜ್ಞಾಸೆಗೆ ಸಮಾಜಮುಖಿ ಪ್ರಕಾಶನದ ಚೊಚ್ಚಲ ಕೃತಿ ಹುಯೆನ್ ತ್ಸಾಂಗ್ ಚರಿತ್ರೆ ಆಧಾರಿತ "ಮಹಾಪಯಣ" ಹಾಗೂ "ಗಾಂಧಿ ವಿಶೇಷಾಂಕ" ಬಿಡುಗಡೆ ಕಾರ್ಯಕ್ರಮ ವೇದಿಕೆಯಾಯಿತು.
ಬೆಂಗಳೂರಿನ ಗಾಂಧೀಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ  ಸಮಾಜಮುಖಿ ಪ್ರಕಾಶನದ ಚೊಚ್ಚಲ ಕೃತಿ "ಮಹಾಪಯಣ" ಹಾಗೂ ಗಾಂಧಿ ವಿಶೇಷಾಂಕಗಳನ್ನು ಚಿಂತಕ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಲೋಕಾರ್ಪಣೆ ಮಾಡಿದರು. 
ಬಳಿಕ ಮಾತನಾಡಿದ ಚಿರಂಜೀವಿಸಿಂಗ್ ಅವರು,
 ಭಾರತ ಸ್ವಾತಂತ್ರ್ಯದಲ್ಲಿ ಗಾಂಧೀಜಿ  ಪಾತ್ರ ಏನು ಎಂಬುದು ಚರ್ಚೆಯಾಗಬೇಕಿದೆ ಎಂದರು. 
ಗಾಂಧೀಜಿ ಮತ್ತು ಅಂಬೇಡ್ಕರ್ ಎರಡು ಧ್ರುವಗಳು, ಹಾಗೇ ಗಾಂಧೀಜಿ ಮತ್ತು ಜಿನ್ನಾ ಎರಡು ಧ್ರುವಗಳು. ಈ ಆಧುನಿಕ ಯುಗದಲ್ಲಿ ಗಾಂಧೀಜಿ ತತ್ವಗಳು ಎಷ್ಟು ಪ್ರಸ್ತುತ ಎಂಬುದು ವಿಮರ್ಶೆಯಾಗಬೇಕಿದೆ ಎಂದರು. 
ಅಮೆರಿಕದಲ್ಲಿ ಚಾಲಕರಹಿತ ಕಾರು ಬಂದಿದೆ. ಭಾರತಕ್ಕೂ ಬರುತ್ತದೆ. ಈ ಸ್ಥಿತಿಯಲ್ಲಿ ಗಾಂಧೀಜಿ ತತ್ವಗಳ ಅನುಸರಣೆ ಬಗ್ಗೆ ಸ್ಪಷ್ಟವಾಗಬೇಕಿದೆ. 
ಗಾಂಧೀಜಿಯವರ ಅಹಿಂಸಾ ತತ್ವ ಜೈನ್ ಧರ್ಮದಿಂದ ಬಂದದ್ದು.
 ಕರ್ನಾಟಕದಲ್ಲಿ ಜೈನ್ ಸಾಹಿತ್ಯ ತುಂಬಿದೆ. ಆದರೆ ಗಾಂಧೀಜಿ ಜನಿಸಿದ ಗುಜರಾತ್ ಅವರ ತತ್ವಗಳಿಂದ ದೂರವಾಗಿದೆ ಎಂದು ಚಿರಂಜೀವಿಸಿಂಗ್ ಹೇಳಿದರು.
ಗಾಂಧೀಜಿ ಮಹಾನ್ ಬರಹಗಾರ, ದಾರ್ಶನಿಕ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯಿಂದಲೇ ಅಲ್ಲ ಎಂದು ನುಡಿದ ಅವರು ಸಮಾಜಮುಖಿ ಪತ್ರಿಕೆ ತಂದಿರುವ ವಿಶೇಷ ಸಂಚಿಕೆ ಗಾಂಧೀಜಿಯವರ ಕುರಿತು ಚರ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಎಲ್. ಹನುಂತಯ್ಯ ಮಾತನಾಡಿ ಸಮಾಜಮುಖಿ ಪತ್ರಿಕೆ ಗಾಂಧೀಜಿ ಕುರಿತು ಅವರ 150 ನೇ ಜಯಂತಿ ಸಂದರ್ಭ ವಿಶೇಷ ಸಂಚಿಕೆ ತಂದಿರುವುದು ಸಂತಸ ತಂದಿದೆ ಎಂದರು. ಗಾಂಧೀಜಿಯವರಷ್ಟು ವೈವಿಧ್ಯಮಯ ವ್ಯಕ್ತಿ ಇನ್ನೊಬ್ಬರಿಲ್ಲ. ಹಾಗೆಯೇ  ವೈರುಧ್ಯಗಳ ವ್ಯಕ್ತಿಯೂ ಹೌದು ಎಂದ ಅವರು ಗಾಂಧೀಜಿಯವರನ್ನು ಅತೀಯಾಗಿ ಟೀಕಿಸಿದವರು ಅಂಬೇಡ್ಕರ್. ಆದರೆ ಭಾರತದ ಸಂವಿಧಾನ ರಚನೆ ಮಾಡುವಾಗ ಗಾಂಧೀಜಿ ಆಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಇಷ್ಟು ಉದಾತ್ತ ವ್ಯಕ್ತಿ ಯಾರಿದ್ದಾರೆ ಎಂದು ಹನುಮಂತಯ್ಯ ನುಡಿದರು.
ದೇಶದ ಸಮಸ್ಯೆಗಳಿಗೆ ಸರ್ವಾಂಗೀಣವಾಗಿ ಯೋಚಿಸಿ ತಮ್ಮದೇ ಪರಿಹಾರ ಸೂಚಿಸಿದವರು ಗಾಂಧೀಜಿ ಅದಕ್ಕಾಗಿ ಅವರು ಮಹಾತ್ಮಾ ಆದರು. ಅವರ 150 ನೇ ಜಯಂತಿಯನ್ನು ಇನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹನುಮಂತಯ್ಯ ಸಲಹೆ ನೀಡಿದರು.
ಇನ್ನು ಸಾಹಿತಿ ಕೆ.ಪುಟ್ಟಸ್ವಾಮಿ ಮಹಾಪಯಣ ಕೃತಿಯ ಕುರಿತು ಮಾತನಾಡಿ, ಶಾಲಾ ಪಠ್ಯಪುಸ್ತಕಗಳಲ್ಲಿ ಹುಯೆನ್ ತ್ಸಾಂಗ್ ಕುರಿತು ಪಾಠವಿದ್ದರೂ ಇಷ್ಟು ವಿಸ್ತೃತ ಮಾಹಿತಿ ಇರಲಿಲ್ಲ ಆ ಕೊರತೆಯನ್ನು ಈ ಕೃತಿ ನೀಗಿಸಿದೆ ಎಂದರು. ಭಾರತದ ಬಹುತೇಕ ಚರಿತ್ರೆ ಇಂತಹ ವಿದೇಶಿ ಪ್ರವಾಸಿಗರಿಂದಲೇ ದಾಖಲಾಗಿದೆ ಎಂದೂ  ಅವರು ಹೇಳಿದರು.
ಮಹಾಪಯಣ ಕೃತಿಯ ಲೇಖಕ ರವಿ ಹಂಜ್ ಮಾತನಾಡಿ,
ಹುಯೆನ್ ತ್ಸಾಂಗ್ ಬಗ್ಗೆ ಭಾರತದಲ್ಲಿ ಬಹುತೇಕರಿಗೆ ತಿಳಿದಿದೆ.
ಆದರೆ ನಾನು ಅಮೆರಿಕದಲ್ಲಿ ಪಿಎಚ್ ಡಿ ಪದವಿ ಪಡೆದವನಿಗೆ ಹುಯೆನ್ ತ್ಸಾಂಗ್ ಬಗ್ಗೆ ಕೇಳಿದಾಗ ಗೊತ್ತಿರಲಿಲ್ಲ ಎಂದರು. 
ಭಾರತದಲ್ಲಿ ಬಹಳ ಜನಪ್ರೀಯನಾಗಿರುವ ಹುಯೆನ್ ತ್ಸಾಂಗ್ ಬಗ್ಗೆ ಅಧ್ಯಯನ ನಡೆಸಬೇಕೆಂದು ಮುಂದುವರಿದಾಗ ಹುಯೆನ್ ತ್ಸಾಂಗ್ ನಿಖರವಾಗಿ ಭಾರತದ ಇತಿಹಾಸವನ್ನು ಬರೆದಿದ್ದಾನೆ ಎಂಬುದು ತಿಳಿಯಿತು. ಹುಯೆನ್ ತ್ಸಾಂಗ್ ಕೇವಲ ಇತಿಹಾಸಕಾರನಲ್ಲದೇ ಒಬ್ಬ ಉತ್ತಮ ಮಾಹಿತಿ ವಿಶ್ಲೇಷಣೆಕಾರ. ಇಂತಹ ವ್ಯಕ್ತಿಯ ಬಗ್ಗೆ ಕನ್ನಡದಲ್ಲಿ ಒಂದೂ ಪುಸ್ತಕ ಇಲ್ಲ ಎಂದು ನಾನು ಈ ಪುಸ್ತಕ ಬರೆದೆ ಎಂದರು.
ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು.
ಸಮಾಜಮುಖಿ ಪತ್ರಿಕೆ ಸಂಪಾದಕ ಚಂದ್ರಕಾಂತ ವಡ್ಡು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.