ಖಾಲಿ ಚೆಕ್ ಪಡೆದು ಅಭ್ಯರ್ಥಿಗಳಿಗೆ ವಂಚನೆ: ಎಂಇಪಿ ಅಧ್ಯಕ್ಷೆ ನೌಹೆರಾ ಶೇಖ್ ವಿರುದ್ಧ ಎಫ್ಐಆರ್ ದಾಖಲು
ಪಾರ್ಟಿ ಫಂಡ್ ಗೆ ಎಂದು ಪಕ್ಷದ ಕಾರ್ಯಕರ್ತರಿಂದ ಬ್ಲಾಂಕ್ ಚೆಕ್ ಗಳನ್ನು ಸಂಗ್ರಹಿಸಿ ವಂಚನೆ ...

ಬೆಂಗಳೂರು: ಪಾರ್ಟಿ ಫಂಡ್ ಗೆ ಎಂದು ಪಕ್ಷದ ಕಾರ್ಯಕರ್ತರಿಂದ ಬ್ಲ್ಯಾಂಕ್ ಚೆಕ್ ಗಳನ್ನು ಸಂಗ್ರಹಿಸಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಅಖಿಲ ಭಾರತ ಮಹಿಳಾ ಸಶಕ್ತೀರಣ ಪಕ್ಷ(ಎಂಇಪಿ)ದ ಅಧ್ಯಕ್ಷೆ ಮತ್ತು ಸ್ಥಾಪಕಿ ನೌಹೆರಾ ಶೇಖ್ ವಿರುದ್ಧ ಕೇಳಿಬಂದಿದೆ.
ಈ ಸಂಬಂಧ ನೌಹೆರಾ ಶೇಖ್ ಮತ್ತು ಇತರ ಐವರ ವಿರುದ್ಧ ಬೆಂಗಳೂರಿನ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಜೀವನ್ ಭೀಮಾ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿ, ಎಂಇಪಿ ಅಭ್ಯರ್ಥಿಗಳು ಎಂದು ಹೇಳಿಕೊಳ್ಳುವ ಕೆಲವರು ನಮ್ಮ ಬಳಿ ಬಂದು ದೂರು ನೀಡಿದ್ದು ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಅಜ್ಜಯ್ಯಎಚ್ ಎನ್ನುವವರು ತಮ್ಮ ದೂರಿನಲ್ಲಿ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ತಮ್ಮನ್ನು ಸ್ಪರ್ಧಿಸುವಂತೆ ಸೂಚಿಸಿದ ನೌಹೆರಾ ಶೇಖ್ ಚುನಾವಣೆಗೆ ಮುನ್ನ ಬೆಂಗಳೂರಿನ ಲೀಲಾ ಪ್ಯಾಲೆಸ್ ಹೊಟೇಲ್ ನಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸುವಂತೆ ಕರೆ ಮಾಡಿದ್ದರು. ಚುನಾವಣಾ ಆಯೋಗದ ನಿಯಮ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಲು ಖರ್ಚಿಗೆಂದು 28 ಲಕ್ಷ ರೂಪಾಯಿ ನಗದು ನೀಡುವುದಾಗಿ ನೌಹೆರಾ ಭರವಸೆ ನೀಡಿದ್ದರು.
ನಂತರ ನೌಹೆರಾ 50,000 ರೂಪಾಯಿಯ ಪಾರ್ಟಿ ಫಂಡ್ ಗೆ ನೀಡಬೇಕೆಂದು ಚೆಕ್ ನಲ್ಲಿ ಬರೆದುಕೊಡಿ ಎಂದು ಕೇಳಿದರು. ಅಷ್ಟು ಹಣ ನೀಡಿದವರಿಗೆ ಬಿ-ಫಾರ್ಮ್ ನೀಡುವುದಾಗಿ ಹೇಳಿದ್ದರು. ನೌಹೆರಾ ಅವರು ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಹೀಗೆ ಹೇಳಿದ ಮಾತನ್ನು ನಂಬಿದ ಅಜ್ಜಯ್ಯ ನೌಹೆರಾ ಅವರಿಗೆ ಚೆಕ್ ನೀಡಿದ್ದರು. ನಂತರ ಬ್ಲಾಂಕ್ ಚೆಕ್ ನೀಡಿ ಎಂದು ಹೇಳಿದ ನೌಹೆರಾ ನಿಮಗೆ 2 ಕೋಟಿ ರೂಪಾಯಿ ಕಪ್ಪು ಹಣ ನೀಡುವುದಾಗಿ ಭರವಸೆ ನೀಡಿದ್ದರು. ಅದರ ಪ್ರಕಾರ ಬ್ಲಾಂಕ್ ಚೆಕ್ ಕೊಟ್ಟೆ ಎನ್ನುತ್ತಾರೆ ಅಜ್ಜಯ್ಯ.
ಕೆಲ ದಿನಗಳು ಕಳೆದ ನಂತರ ಅಜ್ಜಯ್ಯ ನೌಹೆರಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಮತ್ತು ಖುದ್ದಾಗಿ ಭೇಟಿ ಮಾಡಲು ಬರುತ್ತೇನೆ ಎನ್ನುವಾಗ ಏನಾದರೊಂದು ನೆಪ ಹೇಳಿ ತಪ್ಪಿಸುತ್ತಿದ್ದರು. ಕೊನೆಗೂ ಅವರನ್ನು ಭೇಟಿ ಮಾಡಿ ಚೆಕ್ ವಿಷಯ ಕೇಳಿದಾಗ ಬೆದರಿಕೆಯೊಡ್ಡಿದರು, ನೀವು ಹಣ ಕೇಳಿದರೆ ನಾನು ಏನು ಮಾಡಲೂ ಹೇಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಅಜ್ಜಯ್ಯ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿ ಹೇಳುತ್ತಾರೆ.
ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿಗಳನ್ನು ಪಡೆದು ನೌಹೆರಾ ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಒಂದೇ ವಿಧಾನಸಭಾ ಕ್ಷೇತ್ರದಿಂದ ಹಲವು ಅಭ್ಯರ್ಥಿಗಳಿಗೆ ಬಿ-ಫಾರ್ಮ್ ನೀಡಿದ ಆರೋಪ ಕೂಡ ಅವರ ಮೇಲಿದೆ ಎಂದು ಪೊಲೀಸರು ಹೇಳುತ್ತಾರೆ.
ಆಧಾರರಹಿತ ಆರೋಪ: ಎಂಇಪಿ ಪಕ್ಷದ ರಾಜ್ಯ ಸಲಹಾ ಸಮಿತಿ ಸದಸ್ಯೆ ಮತ್ತು ವಕ್ತಾರೆ ವಂದನಾ ಅವರನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪರ್ಕಿಸಿದಾಗ, ಈ ಆರೋಪ ಆಧಾರರಹಿತ, ಚುನಾವಣಾ ಪ್ರಚಾರಕ್ಕೆ ಪರಿಕರಗಳನ್ನು ಒದಗಿಸುತ್ತೇವೆ ಎಂದು ಮಾತ್ರ ಪಕ್ಷದ ಅಧ್ಯಕ್ಷೆ ಭರವಸೆ ಕೊಟ್ಟಿದ್ದರು. ಹಣ ನೀಡುವುದಾಗಿ ಮತ್ತು ಬ್ಲಾಂಕ್ ಚೆಕ್ ತೆಗೆದುಕೊಂಡಿರುವ ಆರೋಪಗಳೆಲ್ಲ ಕಟ್ಟುಕಥೆಯಾಗಿದ್ದು ನೌಹೆರಾ ಶೇಖ್ ಅವರ ವ್ಯಕ್ತಿತ್ತಕ್ಕೆ ಮಸಿಬಳಿಯುವ ಯತ್ನ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


