ಇಂದಿರಾ ಕ್ಯಾಂಟೀನ್ ಹಣಕಾಸಿನ ಅವ್ಯವಹಾರ ತಡೆಗೆ ಪ್ರತ್ಯೇಕ ಸಮಿತಿ ರಚನೆ
ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಕೆಯಾಗುತ್ತಿರುವ ಆಹಾರವೆಷ್ಟು, ನಿತ್ಯ ಎಷ್ಟು ಮಂದಿ ಊಟ, ತಿಂಡಿ ಸೇವಿಸುತ್ತಿದ್ದಾರೆ ಮತ್ತು ವ್ಯರ್ಥವಾಗುತ್ತಿರುವ.

Published On :
ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಕೆಯಾಗುತ್ತಿರುವ ಆಹಾರವೆಷ್ಟು, ನಿತ್ಯ ಎಷ್ಟು ಮಂದಿ ಊಟ, ತಿಂಡಿ ಸೇವಿಸುತ್ತಿದ್ದಾರೆ ಮತ್ತು ವ್ಯರ್ಥವಾಗುತ್ತಿರುವ ಆಹಾರದ ಪ್ರಮಾಣ ಎಷ್ಟು ಎಂಬುದರ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದ್ದಾರೆ.
''ಕ್ಯಾಂಟೀನ್‌ಗಳಲ್ಲಿ ಕಡಿಮೆ ಜನರಿಗೆ ಊಟ, ತಿಂಡಿ ಕೊಡಲಾಗುತ್ತಿದೆ. ಆದರೆ, ಅಧಿಕ ಮಂದಿಗೆ ಬಿಲ್ ಪಾವತಿಸಲಾಗುತ್ತಿದೆ. ರಾತ್ರಿ ವೇಳೆ ಯಾರೂ ಊಟಕ್ಕೆ ಬರುತ್ತಿಲ್ಲ'' ಎಂಬ ಆರೋಪಗಳು ಕೇಳಿ ಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೇಯರ್ ಸಂಪತರಾಜ್ ''ಸರ್ವ ಪಕ್ಷ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸೋಣ. ಸಮಿತಿಯು ಒಂದು ತಿಂಗಳೊಳಗೆ ವರದಿ ನೀಡಲಿ. ಆ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು,'' ಎಂದರು.
ಇದಕ್ಕೆ ಮೊದಲು ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ''ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಟೀಕೆ ಮಾಡುತ್ತಿಲ್ಲ. ಅಲ್ಲಿ ನಿತ್ಯ ಎಷ್ಟು ಮಂದಿ ಆಹಾರ ಸೇವಿಸುತ್ತಿದ್ದಾರೆಂಬುದನ್ನು ವಿಡಿಯೊ ಮಾಡಿ ಪರಿಶೀಲಿಸೋಣ. 400 ಮಂದಿ ಊಟ ಸೇವಿಸಿದ್ದರೂ, 500 ಮಂದಿಗೆ ಬಿಲ್ ಪಾವತಿಸಲಾಗುತ್ತಿದೆ. ಕ್ಯಾಂಟೀನ್ ಆವರಣಗಳ ಸುಂದರೀಕರಣ ಕಾಮಗಾರಿ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆ. ಪಾಲಿಕೆಯ ಗುತ್ತಿಗೆದಾರರಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಳ್ಳಲಾಗಿದೆ,'' ಎಂದು ದೂರಿದರು.
ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ, ''ಕೆಲ ಕ್ಯಾಂಟೀನ್‌ಗಳ ಸಿಬ್ಬಂದಿಗೆ ಊಟ, ತಿಂಡಿ ವಿತರಣೆಯ ಗುರಿ ನೀಡಲಾಗಿದೆ. ನಿಗದಿತ ಜನರಿಗೆ ಊಟ, ತಿಂಡಿ ನೀಡದಿದ್ದರೆ, ಸಂಬಳ ಕಡಿತಗೊಳಿಸುವುದಾಗಿ ಗುತ್ತಿಗೆದಾರರು ಬೆದರಿಕೆ ಹಾಕುತ್ತಿದ್ದಾರೆ. ಮಂಗಳೂರು ಸೌತೆಕಾಯಿಯ ಸಾಂಬಾರು ಮಾಡುತ್ತಿದ್ದು, ಜನರು ಆಹಾರ ಸೇವಿಸಲು ಹಿಂಜರಿಯುತ್ತಿದ್ದಾರೆ,'' ಎಂದರು. ಇದಕ್ಕೆ ಧ್ವನಿಗೂಡಿಸಿದ ಡಾ. ರಾಜು, ''ಕ್ಯಾಂಟೀನ್‌ಗಳಲ್ಲೇ ಆಹಾರ ಸಿದ್ಧಪಡಿಸಿ ನೀಡಬೇಕು. ಪಾರ್ಸೆಲ್ ವ್ಯವಸ್ಥೆಯನ್ನೂ ಜಾರಿಗೆ ತರಬೇಕು,'' ಎಂದು ಒತ್ತಾಯಿಸಿದರು.
ಆಯುಕ್ತ ಎನ್.ಮಂಜುನಾಥ ಪ್ರಸಾದ್, ''ಇಂದಿರಾ ಕ್ಯಾಂಟೀನ್ ಆರಂಭವಾದಾಗಿನಿಂದ ಈವರೆಗೆ ಊಟ, ತಿಂಡಿ ಸೇವಿಸಿದವರ ಸಂಖ್ಯೆ 6 ಕೋಟಿ ದಾಟಿದೆ. ಆಹಾರಕ್ಕೆ ವಿಷ ಸೇರ್ಪಡೆ ಮಾಡುವ ಸಾಧ್ಯತೆಗಳಿವೆ ಎಂಬ ಪೊಲೀಸರ ಗುಪ್ತ ವರದಿ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳ ಸುತ್ತಲೂ ಕಾಪೌಂಡ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಕ್ಕೆ 35 ಕೋಟಿ ರೂ. ವೆಚ್ಚವಾಗಿದ್ದು, ಈ ಮೊತ್ತವನ್ನು ನೀಡಲು ಸರಕಾರ ನಿರಾಕರಿಸಿದೆ. ಹೀಗಾಗಿ, ಪಾಲಿಕೆಯಿಂದಲೇ ಭರಿಸಲಾಗಿದೆ,'' ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


