ಸಿದ್ದರಾಮಯ್ಯ ಔತಣಕೂಟದಲ್ಲಿ ಅಸಂತುಷ್ಠ ನಾಯಕರ 'ಗೈರು'
ಪಕ್ಷದಲ್ಲಿ ತಮ್ಮ ನಾಯಕತ್ವದ ಪ್ರಭಾವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ...

ಬೆಂಗಳೂರು: ಪಕ್ಷದಲ್ಲಿ ತಮ್ಮ ನಾಯಕತ್ವದ ಪ್ರಭಾವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ನಗರದ ಪಂಚತಾರಾ ಹೊಟೇಲೊಂದರಲ್ಲಿ ಔತಣಕೂಟ ಏರ್ಪಡಿಸಿದ್ದರು.
ಆದರೆ ಅವರ ಔತಣಕೂಟದ ಕಾರ್ಯತಂತ್ರ ಹೆಚ್ಚು ಪ್ರಭಾವ ಬೀರಿದಂತೆ ಕಂಡುಬರುವುದಿಲ್ಲ. ಇದು ಪಕ್ಷದಲ್ಲಿ ಎಲ್ಲವೂ ಎಲ್ಲರ ಮಧ್ಯೆ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ.
ಕೊನೆಗೂ ಔತಣಕೂಟದಲ್ಲಿ ಭಾಗಿಯಾಗಿದ್ದು ಸಿದ್ದರಾಮಯ್ಯನವರ ಅನುಯಾಯಿಯಿಗಳೆಂದು ಕರೆಸಿಕೊಳ್ಳುವವರು ಮಾತ್ರ. ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ಸಚಿವ ಸ್ಥಾನ ಕೈತಪ್ಪಿ ಹೋಗಿರುವವರು ಔತಣಕೂಟದಿಂದ ದೂರ ಸರಿದಿದ್ದರು.
ಪಕ್ಷದ ಶಾಸಕರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮಾಜಿ ಸಚಿವರುಗಳಾದ ರೋಶನ್ ಬೇಗ್, ಹೆಚ್ ಕೆ ಪಾಟೀಲ್, ರಾಮಲಿಂಗಾ ರೆಡ್ಡಿ ಸಿದ್ದರಾಮಯ್ಯನವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಲಿಲ್ಲ. ಅವರ ವೈಯಕ್ತಿಕ ಪೂರ್ವನಿಗದಿತ ಕಾರ್ಯಕ್ರಮಗಳು ಮತ್ತು ವಿಧಾನಮಂಡಲ ಅಧಿವೇಶನದಿಂದಾಗಿ ಅವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದ ನಂತರ ಬೆಂಗಳೂರಿಗೆ ವಾಪಸ್ಸಾದ ಸಿದ್ದರಾಮಯ್ಯನವರು ಪಕ್ಷದ ನಾಯಕರು ಮತ್ತು ಶಾಸಕರುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟ ಮತ್ತೊಂದು ರಾಜಕೀಯ ಶಕ್ತಿಯನ್ನು ತೋರಿಸುವ ವೇದಿಕೆಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ರಾಲಿಂಗಾರೆಡ್ಡಿಯವರನ್ನು ಕೇಳಿದರೆ ತಾವು ಜಯನಗರ ಕ್ಷೇತ್ರದಲ್ಲಿ ತಮ್ಮ ಮಗಳ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದೆ. ಹೀಗಾಗಿ ಔತಣಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದರು.ಔತಣಕೂಟ ಕಾಂಗ್ರೆಸ್ ಶಾಸಕಾಂಗ ಪಕ್ಷ ಆಯೋಜಿಸಿದ್ದೋ ಅಥವಾ ಸಿದ್ದರಾಮಯ್ಯನವರೋ ಎಂದು ಗೊತ್ತಿಲ್ಲ. ಆಯೋಜಕರನ್ನು ಕೇಳಿ ಎಂದು ಅಸಮಾಧಾನದ ಉತ್ತರ ನೀಡಿದರು.
ಔತಣಕೂಟದಲ್ಲಿ ಭಾಗವಹಿಸುವುದು ಬಿಡುವುದು ತಮ್ಮ ವೈಯಕ್ತಿಕ ಆಯ್ಕೆ. ನನಗೆ ಹೋಗಬೇಕೆಂದು ಅನಿಸಲಿಲ್ಲ, ಅದಕ್ಕೆ ಹೋಗಲಿಲ್ಲ, ನಾನು ಕಲಬುರಗಿಯಲ್ಲಿದ್ದೇನೆ ಎಂದು ರೋಷನ್ ಬೇಗ್ ಹೇಳಿದರು.
ಸತೀಶ್ ಜಾರಕಿಹೊಳಿಯವರ ಆಪ್ತರನ್ನು ಸಂಪರ್ಕಿಸಿದಾಗ, ಅವರಿಗೆ ಬೆಳಗಾವಿಯಲ್ಲಿ ಬೇರೆ ಕಾರ್ಯಕ್ರಮಗಳಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಸಂಪುಟ ರಚನೆಯಲ್ಲಿ ಅವರನ್ನು ಸೇರಿಸಿಕೊಳ್ಳುತ್ತಿದ್ದರೆ ಔತಣಕೂಟದಲ್ಲಿ ಭಾಗವಹಿಸುತ್ತಿದ್ದರು ಎಂಬ ಉತ್ತರ ಬಂದಿತು.
ಆದರೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಕೆ ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಪುಟ್ಟರಂಗಶೆಟ್ಟಿ ಔತಣಕೂಟದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಯಾರೂ ವಿಡಿಯೊ ಚಿತ್ರೀಕರಣ ಮಾಡದಂತೆ ಸಿದ್ದರಾಮಯ್ಯನವರು ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


